ADVERTISEMENT

ಕೋವಿಡ್‌: ರಾಜ್ಯದಲ್ಲಿ ಎರಡು ಲಕ್ಷ ಮಂದಿ ಗುಣಮುಖ

ಒಂದೇ ದಿನ ಹೆಚ್ಚು ಸಾವು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 20:15 IST
Last Updated 25 ಆಗಸ್ಟ್ 2020, 20:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿತರಾಗಿದ್ದ 6,814 ಮಂದಿ ಚೇತರಿಸಿಕೊಂಡು ಮನೆಗೆ ತೆರಳಿದ್ದು, ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 2 ಲಕ್ಷ (2,04,439) ದಾಟಿದೆ.

8,161 ಕೋವಿಡ್ ಪ್ರಕರಣಗಳು ಮಂಗಳವಾರ ದೃಢಪಟ್ಟಿವೆ. ಸೋಂಕು ಪತ್ತೆ ಪರೀಕ್ಷೆಗಳು ಹೆಚ್ಚಾದಾಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದು, ಕಡಿಮೆ ಇದ್ದಾಗ ಸೋಂಕಿತರ ಸಂಖ್ಯೆಯೂ ಕಡಿಮೆಯಾಗುವುದು ಸಾಮಾನ್ಯವಾಗಿದೆ.

ಕಳೆದ ಶನಿವಾರ 58,618 ಪರೀಕ್ಷೆಗಳಾಗಿದ್ದು, 7,330 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಅದೇ ಭಾನುವಾರ 11 ಸಾವಿರ ರ‍್ಯಾಪಿಡ್ ಆ್ಯಂಟಿಜನ್, 29 ಸಾವಿರ ಆರ್‌ಟಿಪಿಸಿರ್ ಸೇರಿ ಒಟ್ಟು 40,848 ಪರೀಕ್ಷೆಗಳಾಗಿದ್ದು, 5,938 ಮಂದಿಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ವಾರದ ಹಿಂದೆ 63 ಸಾವಿರ ಮಂದಿಗೆ ಪರೀಕ್ಷೆ ಮಾಡಿದ್ದ ಸಂದರ್ಭದಲ್ಲಿ, 8,500ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದವು. ಇದೇ 20ರಿಂದ ನಾಲ್ಕು ದಿನಗಳಲ್ಲಿ ಪರೀಕ್ಷೆ ಸಂಖ್ಯೆ ಕಡಿಮೆಯಾಗಿದ್ದರಿಂದ, ಸೋಂಕಿತರ ಸಂಖ್ಯೆಯೂ ಇಳಿಮುಖವಾಗಿತ್ತು ಎಂದು ಹೇಳಲಾಗುತ್ತಿದೆ.

ADVERTISEMENT

ಒಂದೇ ದಿನ ಹೆಚ್ಚು ಸಾವು

ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 148 ಜನ ಕೋವಿಡ್‌ನಿಂದ ಸಾವಿಗೀಡಾಗಿರುವುದು ಇದೇ ಮೊದಲು. ಈ ಹಿಂದೆ ಒಂದೇ ದಿನ 140 ಸಾವು ವರದಿಯಾಗಿತ್ತು. ರಾಜ್ಯದಲ್ಲಿನ ಒಟ್ಟು ಮೃತರ ಸಂಖ್ಯೆ ಐದು ಸಾವಿರದತ್ತ (4,958) ಸಾಗಿದೆ. ಈ ಪೈಕಿ, ಬೆಂಗಳೂರು 61, ಮೈಸೂರು 16, ಧಾರವಾಡ 8, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ತಲಾ 6, ದಾವಣಗೆರೆ, ಹಾವೇರಿ, ಶಿವಮೊಗ್ಗ ತಲಾ 5 ಮತ್ತು ತುಮಕೂರು, ವಿಜಯಪುರದಲ್ಲಿ ತಲಾ 4 ಸೋಂಕಿತರ ಸಾವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.