ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಸಿದ್ಧವಾಗಿದ್ದು, ಎಸ್‌ಇಪಿ ಆಯೋಗ ಆಗಸ್ಟ್ 8ರಂದು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸುತ್ತಿದೆ.
ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ (ಎಸ್‌ಜೆಪಿ) ಆವರಣದಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಈ ಕುರಿತು ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ‘ಎಸ್‌ಇಪಿ ಅಂತಿಮ ವರದಿ ಸಿದ್ಧವಾಗಿದೆ. ಈ ಕುರಿತು ಉನ್ನತ ಶಿಕ್ಷಣ ಹಾಗೂ ಶಾಲಾ ಶಿಕ್ಷಣ ಸಚಿವರಿಗೆ ಪ್ರಾಥಮಿಕ ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಯ ಪಡೆದು ವರದಿ ಸ್ವೀಕರಿಸಲಾಗುವುದು’ ಎಂದರು.
ತರಾತುರಿಯಲ್ಲಿ ಸಿದ್ಧಪಡಿಸಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ನಡೆದುಕೊಂಡಿತ್ತು. ವರದಿ ಸ್ವೀಕರಿಸಿದ ನಂತರ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 2021ರಲ್ಲಿ ಅಂದಿನ ಎನ್‌ಇಪಿಯನ್ನು ಉನ್ನತ ಶಿಕ್ಷಣದಲ್ಲಿ ಅಳವಡಿಸಿಕೊಂಡಿತ್ತು. ಆದರೆ, ಶಾಲಾ ಶಿಕ್ಷಣದಲ್ಲಿ ಅನುಷ್ಠಾನ ಮಾಡಿರಲಿಲ್ಲ. ಎಸ್‌ಇಪಿ ಮಧ್ಯಂತರ ವರದಿಯ ಆಧಾರದ ಮೇಲೆ, ಕಳೆದ ವರ್ಷ ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳನ್ನು ಹಿಂಪಡೆಯಲಾಗಿತ್ತು. ಮೊದಲಿನಂತೆಯೇ ಮೂರು ವರ್ಷಗಳ ಪದವಿ ಕೋರ್ಸ್‌ಗಳನ್ನು ಮರು ಜಾರಿ ಮಾಡಲಾಗಿತ್ತು. ಬಹು ಪ್ರವೇಶ-ನಿರ್ಗಮನ ಮತ್ತು ಇತರ ಅಂಶಗಳನ್ನು ಸಹ ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಎಸ್‌ಇಪಿ ಅಂತಿಮ ವರದಿಯ ಅನುಷ್ಠಾನ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಪ್ರಯೋಜನವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.