
ನವದೆಹಲಿ: ಕರ್ನಾಟಕದಲ್ಲಿ ಬೀದಿನಾಯಿ ಹಾವಳಿ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶದಲ್ಲಿನ (ದೆಹಲಿ–ಎನ್‌ಸಿಆರ್) ಬೀದಿನಾಯಿಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಎಲ್ಲ ರಾಜ್ಯಗಳನ್ನು ಪ್ರತಿವಾದಿಗಳನ್ನಾಗಿ ಮಾಡಿತ್ತು. ಬೀದಿನಾಯಿ ಹಾವಳಿ ನಿಯಂತ್ರಣದ ಕ್ರಮಗಳ ಕುರಿತು ಎಂಟು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಆಗಸ್ಟ್‌ನಲ್ಲಿ ನಿರ್ದೇಶನ ನೀಡಿತ್ತು. ಕರ್ನಾಟಕ ಸರ್ಕಾರ ಸೇರಿದಂತೆ ಹಲವು ರಾಜ್ಯಗಳು ಪ್ರಮಾಣಪತ್ರ ಸಲ್ಲಿಸಿರಲಿಲ್ಲ.
ಮುಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಹಾಜರಿರಬೇಕು ಎಂದು ಪೀಠ ತಾಕೀತು ಮಾಡಿತ್ತು. ಪ್ರಮಾಣಪತ್ರ ಸಲ್ಲಿಸಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 316 ನಗರಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹ ಪ್ರಕ್ರಿಯೆ ಆರಂಭಿಸಲಾಗಿತ್ತು. ಅದೇ ಹೊತ್ತಿಗೆ, ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭವಾಗಿತ್ತು. ಈ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೀಗಾಗಿ, ಪ್ರಮಾಣಪತ್ರ ಸಲ್ಲಿಕೆ ವಿಳಂಬವಾಗಿದೆ‘ ಎಂದು ಅರುಹಿದ್ದಾರೆ.
ಬೀದಿನಾಯಿ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಪಶುಸಂಗೋಪನಾ ಇಲಾಖೆಯ ಕಾರ್ಯದರ್ಶಿ ಪ್ರತ್ಯೇಕವಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.