ಜಿ. ಪರಮೇಶ್ವರ
ಬೆಂಗಳೂರು: ‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶದ ಪ್ರಜೆಗಳನ್ನು ಗುರುತಿಸಿ, ಬಂಧನ ಕೇಂದ್ರಗಳಿಗೆ ಕಳುಹಿಸಲಾಗುವುದು ಮತ್ತು ಗಡೀಪಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಬರುವವರನ್ನು ಪೊಲೀಸರು ಗುರುತಿಸಲಿದ್ದಾರೆ. ಅವರು ಪಾಸ್‌ಪೋರ್ಟ್, ವೀಸಾದಂತಹ ಅಧಿಕೃತ ದಾಖಲೆಗಳನ್ನು ಹೊಂದಿಲ್ಲದೇ ಇದ್ದರೆ ತಕ್ಷಣ ಬಂಧಿಸಿ, ಬಂಧನ ಕೇಂದ್ರಗಳಿಗೆ ಕಳುಹಿಸಲಾಗುವುದು. ಬಳಿಕ ಈ ಬಗ್ಗೆ ಬಾಂಗ್ಲಾದೇಶದ ರಾಯಭಾರಿಗೆ ಮಾಹಿತಿ ನೀಡುತ್ತೇವೆ. ಜೊತೆಗೆ, ಗಡೀಪಾರು ಮಾಡಲು ಅನುಮತಿ ಪಡೆಯುತ್ತೇವೆ’ ಎಂದರು.
‘ಬಾಂಗ್ಲಾದೇಶ ಪ್ರಜೆಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವುದು ರಾಜ್ಯ ಮತ್ತು ರಾಷ್ಟ್ರ ಎರಡಕ್ಕೂ ಅಪಾಯ ತಂದೊಡ್ಡಿದೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಅಕ್ರಮವಾಗಿ ತಂಗಿರುವ ಬಾಂಗ್ಲಾದೇಶಿಯರ ಮೇಲೆ ಪೊಲೀಸರು ಕ್ರಮಕೈಗೊಳ್ಳುವುದು ನಿತ್ಯವೂ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸುತ್ತಿದ್ದೇವೆ’ ಎಂದರು.
‘ಬಾಂಗ್ಲಾ ದೇಶದ ಪ್ರಜೆಗಳು ರಾಜಕೀಯ ಬೆಂಬಲ ಹೊಂದಿರುವುದರಿಂದ ಅವರನ್ನು ಗಡೀಪಾರು ಮಾಡಲು ಸಾಧ್ಯವಾಗಿಲ್ಲ’ ಎಂಬ ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್, ಬಿಜೆಪಿ ನಾಯಕ ಬಿ. ಭಾಸ್ಕರ್ ರಾವ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪರಮೇಶ್ವರ, ‘ಅವರು ಕಮಿಷನರ್ ಆಗಿದ್ದ ಅವಧಿಯಲ್ಲಿ ಅವರಿಂದ ಸಾಧ್ಯವಾಗದಿದ್ದ ಕಾರ್ಯವನ್ನು ಈಗ ನಾವು ಮಾಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.