ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ವಿದ್ಯಾರ್ಥಿ ಚೆಲ್ಲಾಟ: ಪ್ರಶ್ನೆಪತ್ರಿಕೆ ಸೋರಿಕೆ ವದಂತಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:45 IST
Last Updated 14 ಮಾರ್ಚ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದು, ಶನಿವಾರ ನಡೆದ ಕಂಪ್ಯೂಟರ್‌ ಸೈನ್ಸ್‌ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ ಎಂದು ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸಂದೇಶ ಕಳುಹಿಸಿ ಕುಚೋದ್ಯವಾಡಿದ ವಿದ್ಯಾರ್ಥಿಯೊಬ್ಬ ಸಿಕ್ಕಿಬಿದ್ದಿದ್ದಾನೆ.

ನಗರದ ಸಾಯಿ ಗೌತಮ್‌ ಎಂಬ ವಿದ್ಯಾರ್ಥಿ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರಿಗೆ ಶುಕ್ರವಾರ ರಾತ್ರಿ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ, ಕಂಪ್ಯೂಟರ್‌ ಸೈನ್ಸ್‌ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ, ಬದಲಿ ಪ್ರಶ್ನೆಪತ್ರಿಕೆ ನೀಡಬೇಕೆಂದು ತಿಳಿಸಿದ್ದ.

ತಕ್ಷಣ ಅಧಿಕಾರಿಗಳು ಬೆಂಗಳೂರು ಉತ್ತರ ಡಿಸಿಪಿಗೆ ದೂರು ನೀಡಿದ್ದು, ಡಿಸಿಪಿ ಶಶಿಕುಮಾರ್‌ ನೇತೃತ್ವದ ತಂಡ ಫೋನ್‌ ನಂಬರ್‌ ಆಧರಿಸಿ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿತ್ತು. ‘ನಾನು ಕಂಪ್ಯೂಟರ್‌ ಸೈನ್ಸ್‌ ವಿಷಯವನ್ನು ಸರಿಯಾಗಿ ಓದಿಲ್ಲ, ಪರೀಕ್ಷೆ ಮುಂದೂಡಲು ಈ ತಂತ್ರ ರೂಪಿಸಿದೆ’ ಎಂದು ವಿಚಾರಣೆ ವೇಳೆ ವಿದ್ಯಾರ್ಥಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಈ ವಾಟ್ಸ್‌ಆ್ಯಪ್‌ ಸಂದೇಶ ವೈರಲ್‌ ಆಗಿದ್ದರೆ ಬಹಳ ದೊಡ್ಡ ಅನಾಹುತ ಆಗುತ್ತಿತ್ತು. ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಇದು ತಪ್ಪಿದೆ. ತಪ್ಪಿತಸ್ಥ ವಿದ್ಯಾರ್ಥಿಯನ್ನು ಪಿಯು ಪರೀಕ್ಷೆಯಿಂದ ಹೊರಹಾಕಲಾಗಿದೆ, ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.