ADVERTISEMENT

ಕಬ್ಬು, ಮೆಕ್ಕೆಜೋಳ ಸಮಸ್ಯೆ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸಿ: ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 14:26 IST
Last Updated 5 ಡಿಸೆಂಬರ್ 2025, 14:26 IST
<div class="paragraphs"><p>ಶಿವಾನಂದ ಪಾಟೀಲ</p></div>

ಶಿವಾನಂದ ಪಾಟೀಲ

   

ಬೆಂಗಳೂರು: ರಾಜ್ಯದ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗಳನ್ನು ಸಂಸತ್‌ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಕೋರಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದರು.

ಬೆಂಗಳೂರಿನಲ್ಲಿರುವ ನಿವಾಸದಲ್ಲಿ ಖರ್ಗೆ ಅವರನ್ನು ಭೇಟಿ ನೀಡಿದ ಪಾಟೀಲ, ಕಬ್ಬು, ಮೆಕ್ಕೆಜೋಳ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ADVERTISEMENT

‘ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಪ್ರತಿ ಟನ್‌ಗೆ ₹3,500 ನೀಡಬೇಕು ಎಂದು ಆಗ್ರಹಿಸಿ ಧರಣಿ ಹಾಗೂ ರಸ್ತೆ ತಡೆ ಚಳವಳಿ ಮಾಡಿದ್ದರು. ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತ ಮುಖಂಡರ ಸಭೆ ನಡೆಸಿದ ಸರ್ಕಾರ, ಪ್ರತಿ ಟನ್‌ಗೆ ₹3,250 ನೀಡಲು ಕಾರ್ಖಾನೆ ಮಾಲೀಕರನ್ನು ಒಪ್ಪಿಸಿದೆ. ಸರ್ಕಾರ ಪ್ರತಿ ಟನ್‌ಗೆ ₹50 ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ. ಇದರಿಂದ ಪ್ರತಿ ಟನ್‌ಗೆ ₹3,300 ಸಿಗಲಿದೆ’ ಎಂದು ವಿವರ ನೀಡಿದರು.

‘ಕೇಂದ್ರ ಸರ್ಕಾರದ ನೀತಿಯ ಪರಿಣಾಮ ಸಕ್ಕರೆ ಉದ್ಯಮ ಸಂಕಷ್ಟದಲ್ಲಿದೆ. ಕಬ್ಬು ಬೆಳೆಗಾರರಿಗೂ ಸಮಸ್ಯೆಯಾಗುತ್ತಿದೆ. ಕಬ್ಬಿಗೆ ನಿಗದಿ ಮಾಡುವ ನ್ಯಾಯಯುತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ಹೆಚ್ಚಳ ಮಾಡಿದಂತೆ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನೂ ಹೆಚ್ಚಳ ಮಾಡಬೇಕು. ಆದರೆ, ಸಕ್ಕರೆ ದರ ಹೆಚ್ಚಳ ಮಾಡುತ್ತಿಲ್ಲ. ಸಕ್ಕರೆ ರಫ್ತಿಗೆ ಅನುಮತಿ ನೀಡುತ್ತಿಲ್ಲ. ರಾಜ್ಯಕ್ಕೆ ನಿಗದಿಯಾಗಿರುವ ಎಥೆನಾಲ್‌ ಉತ್ಪಾದನಾ ಪ್ರಮಾಣವನ್ನು ಕಡಿತ ಮಾಡಿದೆ. ಈ ಎಲ್ಲ ಕಾರಣಗಳಿಂದ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಈ ಸಮಸ್ಯೆ ಕುರಿತು ವಿಸ್ತೃತವಾಗಿ ಚರ್ಚೆ ಮಾಡಬೇಕು’ ಎಂದು ಕೋರಿದರು.

‘ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹2,400 ನಿಗದಿಪಡಿಸಿದೆ. ಮಾರುಕಟ್ಟೆಯಲ್ಲಿ ₹1,600ರಿಂದ ₹1800 ಇದೆ. ಬೆಲೆ ವ್ಯತ್ಯಾಸ ಯೋಜನೆ ಅಡಿಯಲ್ಲಿ ಖರೀದಿ ಮಾಡಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದರೂ ಸ್ಪಂದಿಸಿಲ್ಲ. ಕೇಂದ್ರದ ಮೇಲೆ ಒತ್ತಡ ತರಬೇಕಿದ್ದ ರಾಜ್ಯದ ಬಿಜೆಪಿ ಮುಖಂಡರು ರೈತರ ಹೋರಾಟವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.