ಬೆಂಗಳೂರು: ಹಿಂದುತ್ವಪರ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿರೋಧಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆರ್. ಅಶೋಕ, 'ಕಳೆದ 22 ತಿಂಗಳ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮತಾಂಧ ಜಿಹಾದಿ ಬ್ರದರ್ಸ್‌ಗಳು ನಿರಂತರವಾಗಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅತಿಯಾದ ಓಲೈಕೆಯ ಕಾರಣದಿಂದಲೇ ಮತಾಂಧ ಬ್ರದರ್ಸ್‌ಗಳು ಕಾನೂನು ಕೈಗೆತ್ತಿಕೊಂಡು ಹಿಂದೂಗಳನ್ನು ಹತ್ತಿಕ್ಕುತ್ತಿದ್ದಾರೆ'.
'ಸಿಎಂ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಪರೇಶ್ ಮೇಸ್ತಾ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ರುದ್ರೇಶ್ ಅವರಂತಹ ಹಿಂದೂ ಕಾರ್ಯಕರ್ತರ ಕೊಲೆ ನಡೆದಿತ್ತು. ಇವೆಲ್ಲ ಕಾಂಗ್ರೆಸ್ ಪಕ್ಷದ ಅತಿಯಾದ ತುಷ್ಟೀಕರಣದ ನೇರ ಪ್ರಭಾವದಿಂದ ಆಗಿರುವ ದಾರುಣ ಹತ್ಯೆಗಳು. ಈಗ ಸಹೋದರ ಸುಹಾಸ್ ಶೆಟ್ಟಿ ಕೊಲೆಗೂ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣವೇ ಕಾರಣ' ಎಂದು ದೂರಿದ್ದಾರೆ.
ಕರ್ನಾಟಕವನ್ನು ಪಾ'ಕೈ'ಸ್ತಾನ ಮಾಡಲು ಹೊರಟಿರುವ ಸಿದ್ದರಾಮಯ್ಯ ಸರ್ಕಾಕ್ಕೆ ಹಿಂದೂಗಳು ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದೂ ಅವರು ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಅವರನ್ನು ಹತ್ಯೆಗೈದ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅತ್ಯಂತ ಆಘಾತವನ್ನುಂಟು ಮಾಡಿದೆ. ದುಷ್ಕರ್ಮಿಗಳಿಗೆ ಕಾನೂನಿನ ಕಿಂಚಿತ್ತೂ ಭಯವೂ ಇಲ್ಲದಂತಾಗಿದ್ದು, ಇಂತಹ ಅಮಾನುಷ ಅಪರಾಧಗಳು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು-ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ರಾಜ್ಯ ಸರ್ಕಾರ ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತೇನೆ' ಎಂದಿದ್ದಾರೆ.
'ಮೃತ ಕಾರ್ಯಕರ್ತನ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬ ವರ್ಗದವರಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬ ಹಿಂದೂ ಕಾರ್ಯಕರ್ತ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
'ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಆಪೋಶನ ಮಾಡಿಕೊಂಡಿರುವ ಗೂಂಡಾಗಳು, ಸಮಾಜಘಾತುಕ ಶಕ್ತಿಗಳು ಕೊಲೆ, ಸುಲಿಗೆ, ಅತ್ಯಾಚಾರ ಹಾಗೂ ದೌರ್ಜನ್ಯಗಳಲ್ಲಿ ನಿರತವಾಗಿವೆ. ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಅವರ ಭೀಕರ ಕೊಲೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ಧಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಮತೀಯವಾದಿ ಹಿಂದೂ ವಿರೋಧಿ ರಕ್ಕಸರು ನಡು ರಸ್ತೆಯಲ್ಲೇ ಅಟ್ಟಹಾಸಗೈದು ಕೊಲೆಗೈಯುತ್ತಿರುವ ದೃಶ್ಯ ನಾವು ಯಾವ ನೆಲದಲ್ಲಿ ವಾಸಿಸುತ್ತಿದ್ದೇವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ, ಈ ಅಮಾನುಷ ಘಟನೆಯನ್ನು ತೀವ್ರವಾಗಿ ಖಂಡಿಸುವೆ' ಎಂದಿದ್ದಾರೆ.
'ಸುಹಾಸ್ ಬರ್ಬರ ಕೊಲೆಗೀಡಾಗಿರುವ ಘಟನೆಯ ಹಿನ್ನೆಲೆ ಪೂರ್ವನಿಯೋಜಿತ ಎನ್ನುವುದು ಸುಸ್ಪಷ್ಟ. ಈ ಹಿನ್ನೆಲೆಯಲ್ಲಿ ಇದು ಗುಪ್ತಚರ ಇಲಾಖೆಯ ವೈಫಲ್ಯವೋ? ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತವರ ಹೊಣೆಗೇಡಿತನ ಕಾರಣವೋ? ಎಂಬ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ' ಎಂದು ಅವರು ಆಗ್ರಹಿಸಿದ್ದಾರೆ.
'ಕಾಶ್ಮೀರದಲ್ಲಿ ಹಿಂದೂಗಳ ಮಾರಣ ಹೋಮದ ಸುದ್ದಿ ಇನ್ನೂ ಹಸಿಯಾಗಿರುವಾಗಲೇ, ಹಿಂದೂ ಕಾರ್ಯಕರ್ತನನ್ನು ಕೊಚ್ಚಿಕೊಂದಿರುವ ಮಂಗಳೂರು ಘಟನೆಯನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಾಶ್ಮೀರ ಪರಿಸ್ಥಿತಿ ನಿರ್ಮಾಣ ಮಾಡಲು ಹೊರಟಂತೆ ಕಾಣುತ್ತಿದೆ. ಮೇಲಿಂದ ಮೇಲೆ ಕರ್ನಾಟಕದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು ರಾಜ್ಯದ ಜನತೆ ತೀವ್ರ ಆತಂಕಿತರಾಗಿದ್ದಾರೆ'.
'ಕಾನೂನು ಸುವ್ಯವಸ್ಥೆಯನ್ನು ಕೊಲೆಗಡುಕರು, ದುಷ್ಟರ ಕೈಗೆ ಒಪ್ಪಿಸಿರುವಂತೆ ಕಾಣುತ್ತಿರುವ ಈ ಕಾಂಗ್ರೆಸ್ ಸರ್ಕಾರದ ಮುಷ್ಟಿಯಿಂದ ರಾಜ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸುವಂತೆ ಒತ್ತಾಯಿಸುವೆ. ಮೃತ ಕಾರ್ಯಕರ್ತನ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಕಾರ್ಯಕರ್ತ ಸುಹಾಸ್ ಅವರ ಕುಟುಂಬ ವರ್ಗದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವೆ' ಎಂದೂ ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.