ADVERTISEMENT

ಅನನ್ಯಾ ಭಟ್ ಪ್ರಕರಣ: 5ನೇ ದಿನವೂ ಸುಜಾತಾ ಭಟ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:47 IST
Last Updated 31 ಆಗಸ್ಟ್ 2025, 5:47 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಬೆಳ್ತಂಗಡಿ (ದಕ್ಷಿಣ ಕನ್ನಡ): ತನ್ನ ಮಗಳು ಅನನ್ಯಾ ಭಟ್ ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿರುವ ಸುಜಾತಾ ಭಟ್ ಅವರ ವಿಚಾರಣೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಶನಿವಾರವೂ ಮುಂದುವರಿಯಿತು. ಈ ಮೂಲಕ ಅವರ ವಿಚಾರಣೆ ಸತತ ಐದನೇ ದಿನಕ್ಕೆ ಕಾಲಿಟ್ಟಿತು. 

ADVERTISEMENT

‘ಸುಜಾತಾ ಭಟ್‌ ತನಿಖಾ ತಂಡದ ಹಾದಿ ತಪ್ಪಿಸಿರುವುದು ಅಥವಾ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ವಿಚಾರಣೆಯಲ್ಲಿ ಸಾಬೀತಾದರೆ ಅದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಮುಂದಿನದ್ದೆಲ್ಲವೂ ನ್ಯಾಯಾಲಯದಲ್ಲಿ ನಿರ್ಧಾರ ಆಗಲಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಸಮೀರ್‌ ವಿಚಾರಣೆ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಕೃತಕ ಬುದ್ದಿಮತ್ತೆ ಬಳಸಿ 23 ನಿಮಿಷಗಳ ವಿಡಿಯೊ ಸಿದ್ಧಪಡಿಸಿ ಪ್ರಸಾರ ಮಾಡಿದ್ದ ಯೂಟ್ಯೂಬರ್‌ ಸಮೀರ್‌ ಎಂ.ಡಿ., ಶನಿವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾದರು.

ಮಧ್ಯಾಹ್ನದವರೆಗೆ ಅವರು ಠಾಣೆಯಲ್ಲಿದ್ದರು. ಅವರ ಹೇಳಿಕೆ ಪಡೆದುಕೊಂಡು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೊಗೆ ಸಂಬಂಧಿಸಿ ಸಮೀರ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

ಇನ್ನಷ್ಟು ಸ್ಥಳಗಳಲ್ಲಿ ಮಹಜರು: ‘ಸಾಕ್ಷಿ ದೂರುದಾರನನ್ನು ಕೆಲ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಲಾಗುತ್ತಿದೆ. ಸಾಕ್ಷಿ ದೂರುದಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆಬುರುಡೆಯ ಎಫ್‌ಎಸ್‌ಎಲ್ ವರದಿ ಇನ್ನೂ ತಲುಪಿಲ್ಲ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಎಸ್‌ಐಟಿ ವಶದಲ್ಲೇ ಇರಲಿ

‘ಸಾಕ್ಷಿ ದೂರುದಾರನನ್ನು ತನಿಖೆಯ ನಂತರವೂ ಎಸ್‌ಐಟಿ ವಶದಲ್ಲೇ ಇರಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ್ತಿ, ಸೌಜನ್ಯಾ ಪರ ಹೋರಾಟದಲ್ಲಿ ಸಕ್ರಿಯರಾಗಿರುವ ಪ್ರಸನ್ನಾ ರವಿ ಅವರು ಶನಿವಾರ ಎಸ್‌ಐಟಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ತನಿಖೆಯ ನಂತರ ಸಾಕ್ಷಿ ದೂರುದಾರನಿಗೆ ಏನಾದೀತು ಎಂದು ಹೇಳುವುದು ಕಷ್ಟ. ಈ ಕಾರಣದಿಂದ ಆತನಿಗೆ ರಕ್ಷಣೆ ಅಗತ್ಯ ಎಂಬುದನ್ನು ಪ್ರತಿಪಾದಿಸಿದ್ದೇನೆ’ ಎಂದರು.

‘ಸೌಜನ್ಯಾ ಅವರ ತಾಯಿ ಕುಸುಮಾವತಿ ಈಚೆಗೆ ಎಸ್‌ಐಟಿಗೆ ಕೊಟ್ಟಿರುವ ದೂರಿನಲ್ಲಿ ತಮ್ಮ ಮಗಳ ಸಾವಿಗೆ ಸಂಬಂಧಿಸಿ ಸಾಕ್ಷಿ ದೂರುದಾರನಿಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ. ಆದ್ದರಿಂದ ಆತನಿಗೂ ಅಪಾಯ ಆಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.