ADVERTISEMENT

ಸುಪ್ರೀಂ ಕೋರ್ಟ್‌ ತೀರ್ಪು: ಔಷಧ ಪರಿವೀಕ್ಷಕರ ನೇಮಕ ಸುಗಮ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 15:58 IST
Last Updated 18 ಜನವರಿ 2026, 15:58 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ಬೆಂಗಳೂರು: ಔಷಧ ಪರಿವೀಕ್ಷಕ (ಡ್ರಗ್‌ ಇನ್‌ಸ್ಪೆಕ್ಟರ್‌) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರದ ಕಾಯ್ದೆಯಲ್ಲಿ ನಿಗದಿಪಡಿಸಿರುವ ಅರ್ಹತೆಗಳ ಹೊರತಾಗಿ ಹೆಚ್ಚುವರಿ ಅರ್ಹತೆಗಳನ್ನು ರಾಜ್ಯ ಸರ್ಕಾರಗಳು ವಿಧಿಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ ಇದೇ 13ರಂದು ನೀಡಿರುವ ಈ ತೀರ್ಪಿನ ಪರಿಣಾಮ 2018ರಿಂದ ನನೆಗುದಿಯಲ್ಲಿರುವ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಕೆಪಿಎಸ್‌ಸಿಗೆ ಹಾದಿ ಸುಗಮವಾಗಿದೆ.

ಔಷಧ ನಿಯಂತ್ರಣ ಇಲಾಖೆಯಲ್ಲಿ ಔಷಧ ಪರಿವೀಕ್ಷಕರ ತೀವ್ರ ಕೊರತೆಯಿದೆ. ಒಟ್ಟು 112 ಮಂದಿಯನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇದ್ದರೂ ಎಂಟು ಜನ ಮಾತ್ರ ಕೆಲಸದಲ್ಲಿ ಇದ್ದಾರೆ.

ADVERTISEMENT

ಒಟ್ಟು 83 (68+15 ಹೈದರಾಬಾದ್‌ ಕರ್ನಾಟಕ) ಔಷಧ ಪರಿವೀಕ್ಷಕರ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ 2018ರ ಮಾರ್ಚ್‌ 23ರಂದು ಅಧಿಸೂಚನೆ ಹೊರಡಿಸಿತ್ತು. 1:3 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಹಾಗೂ ಸಂದರ್ಶನಗಳು ನಡೆಯುತ್ತಿದ್ದ ಹಂತದಲ್ಲಿ, ಅಭ್ಯರ್ಥಿಗಳು ಔಷಧಗಳ ತಯಾರಿ ಅಥವಾ ಪರೀಕ್ಷೆಯಲ್ಲಿ ಕನಿಷ್ಠ 18 ತಿಂಗಳ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ಷರತ್ತು ಅನ್ನು ಸರ್ಕಾರ ವಿಧಿಸಿತ್ತು.

ಕೇಂದ್ರ ಸರ್ಕಾರದ ‘ಡ್ರಗ್ಸ್ ಆ್ಯಂಡ್‌ ಕಾಸ್ಮೆಟಿಕ್ಸ್ ಕಾಯ್ದೆ–1940’ ಮತ್ತು ಅದರಡಿ ರೂಪಿಸಲಾದ ನಿಯಮಗಳಡಿ ಕೆಪಿಎಸ್‌ಸಿ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಬೇಕಿತ್ತು. ಸರ್ಕಾರ ಹೇಳಿದ ಹೆಚ್ಚುವರಿ ಅರ್ಹತೆಯು ಈ ಕಾಯ್ದೆಯಲ್ಲಿ ಇಲ್ಲದೇ ಇದ್ದುದರಿಂದ ಅದನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ‘ಔಷಧ ಪರಿವೀಕ್ಷಕ ಹುದ್ದೆಗಳಿಗೆ ಅರ್ಹತೆಗಳನ್ನು ನಿಗದಿಪಡಿಸುವ ಅಧಿಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಮಾತ್ರವಿದ್ದು, ರಾಜ್ಯ ಸರ್ಕಾರ ಹೆಚ್ಚುವರಿ ಅರ್ಹತೆ ವಿಧಿಸುವುದು ಸಂವಿಧಾನಬಾಹಿರ. ಹೀಗಾಗಿ, ಅದಾಗಲೇ ಸಿದ್ಧವಾಗಿದ್ದ ಆಯ್ಕೆ ಪಟ್ಟಿಯನ್ನು ಮರುಸಿದ್ಧಪಡಿಸಬೇಕು’ ಎಂದು ಕೆಪಿಎಸ್‌ಸಿ ಮತ್ತು ರಾಜ್ಯ ಸರ್ಕಾರಕ್ಕೆ 2023ರ ಮಾರ್ಚ್ 31ರಂದು ನಿರ್ದೇಶನ ನೀಡಿತ್ತು.

ಹೈಕೋರ್ಟ್ ತೀರ್ಪು ಅನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೇ ರೀತಿ ನೇಮಕಾತಿಗೆ ಸಂಬಂಧಿಸಿದಂತೆ ಹರಿಯಾಣ ರಾಜ್ಯದ ಪ್ರಕರಣವನ್ನೂ ಸೇರಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಔಷಧ ಪರಿವೀಕ್ಷಕರ ಅರ್ಹತೆ ನಿಗದಿ ಮಾಡುವ ಅಧಿಕಾರ ‘ಡ್ರಗ್ಸ್ ಆ್ಯಂಡ್‌ ಕಾಸ್ಮೆಟಿಕ್ಸ್ ಕಾಯ್ದೆ –1940’ ಪ್ರಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಔಷಧಗಳ ತಯಾರಿ ಅಥವಾ ಪರೀಕ್ಷೆಯಲ್ಲಿ ಅನುಭವವನ್ನು ನೇಮಕಾತಿಗೆ ಕಡ್ಡಾಯ ಅರ್ಹತೆಯಾಗಿ ಪರಿಗಣಿಸಿರುವ ರಾಜ್ಯಗಳ ಅಧಿಸೂಚನೆಯು ಅಧಿಕಾರ ಮೀರಿದ್ದಾಗಿದೆ’ ಎಂದು ಇದೇ 13ರಂದು ನೀಡಿರುವ ತೀರ್ಪಿನಲ್ಲಿ ಹೇಳಿದೆ.

‘ಔಷಧ ಪರಿವೀಕ್ಷಕ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್‌ಸಿ ಎಂಟು ವಾರಗಳ ಒಳಗೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಬೇಕು. ನಂತರ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿಗೆ ಸರ್ಕಾರ ಎಂಟು ವಾರಗಳ ಒಳಗೆ ಕ್ರಮ ತೆಗೆದುಕೊಳ್ಳಬೇಕು ಎಂದೂ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ, ಕೆಪಿಎಸ್‌ಸಿ ತಕ್ಷಣ ಆಯ್ಕೆ ಪಟ್ಟಿಯನ್ನು ಮರು ಸಿದ್ಧಪಡಿಸಬೇಕು’ ಎಂದು ಹುದ್ದೆ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.