ADVERTISEMENT

‘ಸುಪ್ರೀಂ’ ಆದೇಶ: ಮತ್ತೆ ಹಿಂಬಡ್ತಿ? - ಎಸ್‌ಸಿ, ಎಸ್‌ಟಿ ನೌಕರರ ಬಡ್ತಿಗೆ ತೊಂದರೆ

ಜ. 28ರ ಆದೇಶದಿಂದ 1,500 ಎಸ್‌ಸಿ, ಎಸ್‌ಟಿ ನೌಕರರ ಬಡ್ತಿಗೆ ತೊಂದರೆ

ರಾಜೇಶ್ ರೈ ಚಟ್ಲ
Published 19 ಫೆಬ್ರುವರಿ 2022, 20:15 IST
Last Updated 19 ಫೆಬ್ರುವರಿ 2022, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಜ. 28ರಂದು ನೀಡಿರುವ ಮಧ್ಯಂತರ ಆದೇಶ ಜಾರಿಗೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಈ ಆದೇಶ ಜಾರಿಯಿಂದ 15ಕ್ಕೂ ಹೆಚ್ಚು ಇಲಾಖೆಗಳಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ನೇಮಕಗೊಂಡ 1,500ಕ್ಕೂ ಹೆಚ್ಚುಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ನೌಕರರ ಮುಂಬಡ್ತಿ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಸ್ವಂತ ಅರ್ಹತೆಯಲ್ಲಿ ನೇಮಕಗೊಂಡು ಬಡ್ತಿ ಪಡೆದ ಎಸ್‌ಸಿ, ಎಸ್‌ಟಿ ನೌಕರರ ಬಡ್ತಿಗೂ ಸಮಸ್ಯೆ ಆಗಲಿದೆ.‌

‘ಸರ್ಕಾರಿ ನೌಕರಿಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದವರಿಗೆ (ಎಸ್‌ಟಿ) ಬಡ್ತಿಯಲ್ಲಿ ಮೀಸಲಾತಿ ನೀಡುವ ವೇಳೆ ಅಗತ್ಯ ಪ್ರಾತಿನಿಧ್ಯ ಇಲ್ಲ ಎಂಬುದನ್ನು ಇಡೀ ಸೇವೆಯಲ್ಲಿ ಅಥವಾ ವರ್ಗದಲ್ಲಿ ಇರುವ ಪ್ರಾತಿನಿಧ್ಯದ ಆಧಾರದಲ್ಲಿ ನಿರ್ಧರಿಸುವಂತಿಲ್ಲ. ಯಾವ ಶ್ರೇಣಿ ಅಥವಾ ಹುದ್ದೆಯ ವರ್ಗಕ್ಕೆ ಬಡ್ತಿ ಕೇಳಲಾಗಿದೆಯೋ ಆ ಶ್ರೇಣಿ ಅಥವಾ ಹುದ್ದೆ ವರ್ಗದಲ್ಲಿ ಪ್ರಾತಿನಿಧ್ಯ ಎಷ್ಟಿದೆ ಎಂಬುದನ್ನು ನೋಡಿಕೊಂಡು ನಿರ್ಧರಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶದಲ್ಲಿ ತಿಳಿಸಿತ್ತು.

ರಾಜ್ಯದಲ್ಲಿ ಈ ಆದೇಶ ಜಾರಿಗೊಳಿಸುವ ಕುರಿತಂತೆ ಅಡ್ವೊಕೇಟ್‌ ಜನರಲ್‌ ಅವರಿಂದ ಸರ್ಕಾರ ಅಭಿಪ್ರಾಯ ಪಡೆದಿದೆ. ಅಲ್ಲದೆ, ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ವೃಂದಗಳಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಸಂಖ್ಯೆಯ ಬಗ್ಗೆ ಮುಖ್ಯ ಕಾರ್ಯದರ್ಶಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‘ಪವಿತ್ರ–1’ ಪ್ರಕರಣದಲ್ಲಿ ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ 2017ರ ಫೆ. 9ರಂದು ನೀಡಿದ್ದ ತೀರ್ಪು ಜಾರಿಯಿಂದ 3,798 ಎಸ್‌ಸಿ, ಎಸ್‌ಟಿ ನೌಕರರು ಹಿಂಬಡ್ತಿಗೆ ಒಳಗಾಗಿದ್ದರು. 65 ಸಾವಿರಕ್ಕೂ ಹೆಚ್ಚು ನೌಕರರ ಜ್ಯೇಷ್ಠತೆಯ ಮೇಲೆ ಪರಿಣಾಮ ಉಂಟಾಗಿತ್ತು. ಹೀಗೆ ಹಿಂಬಡ್ತಿಗೆ ಒಳಗಾಗಿದ್ದ ಈ ನೌಕರರ ಹಿತರಕ್ಷಣೆಗೆ ರಾಜ್ಯ ಸರ್ಕಾರ, ‘ತತ್ಪರಿಣಾಮದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ–2017’ ರೂಪಿಸಿತ್ತು. ಈ ಕಾಯ್ದೆಯನ್ನು ‘ಪವಿತ್ರ– 2‌‘ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಿಂಧುಗೊಳಿಸಿದ್ದರಿಂದ ಹಿಂಬಡ್ತಿಗೆ ಒಳಗಾಗಿದ್ದ ನೌಕರರನ್ನು ಹಿಂಬಡ್ತಿ ಪೂರ್ವದಲ್ಲಿದ್ದ ಹುದ್ದೆಗೆ ಮರು ನಿಯುಕ್ತಿಗೊಳಿಸಲಾಗಿತ್ತು. ಅಲ್ಲದೆ, 1978ರ ಏಪ್ರಿಲ್‌ 27ರಿಂದ ಅನ್ವಯವಾಗುವಂತೆ ಈ ಕಾಯ್ದೆಯಲ್ಲಿರುವ ಅಂಶಗಳ ಆಧಾರದಲ್ಲಿ ಜ್ಯೇಷ್ಠತಾ ಪಟ್ಟಿ ಪುನರ್‌ ಅವಲೋಕಿಸಬೇಕಿತ್ತು.

ಇದೀಗ, ಜ. 28ರ ಆದೇಶ ಜಾರಿಯಾದರೆ, ಪ್ರತಿ ಇಲಾಖೆಯಲ್ಲಿ ಒಟ್ಟು ವೃಂದ ಬಲದ ಆಧಾರದಲ್ಲಿ ಬಡ್ತಿ ಮೀಸಲಾತಿ ನಿರ್ಧಾರ ಆಗಲಿದೆ. 15ಕ್ಕೂ ಹೆಚ್ಚು ಇಲಾಖೆಗಳಲ್ಲಿ ಖಾಲಿ ಮತ್ತು ನಿವೃತ್ತಿಯಾದ ಹುದ್ದೆಗಳಿಗೆ ನೇಮಕಾತಿ ನಡೆಯದೆ ಇರುವುದರಿಂದ, ಎಲ್ಲೆಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳನ್ನು ತುಂಬಲಾಗಿದೆಯೊ ಅಲ್ಲಿ ಹಿಂಬಡ್ತಿ ಸಮಸ್ಯೆ ಸೃಷ್ಟಿಯಾಗಲಿದೆ. ಸುಮಾರು 20 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಗೆ ನೇಮಕಗೊಂಡ 846 ಸಹಾಯಕ ಎಂಜಿನಿಯರ್‌ ಮತ್ತು 516 ಜೂನಿಯರ್‌ ಎಂಜಿನಿಯರ್‌ಗಳ ಬಡ್ತಿ ಮೇಲೆ ಪರಿಣಾಮ ಉಂಟಾಗಲಿದೆ. ಅಲ್ಲದೆ, ಸ್ವಂತ ಅರ್ಹತೆ (ಮೆರಿಟ್‌) ಆಧಾರದಲ್ಲಿ ನೇಮಕಗೊಂಡ ಎಸ್‌ಸಿ ಮತ್ತು ಎಸ್‌ಟಿ ನೌಕರರನ್ನು ಕೂಡಾ ಶೇ 15:3 ಮೀಸಲಾತಿ ಕೋಟಾಕ್ಕೆ ಪರಿಗಣಿಸಬೇಕಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್‌ನ ಜ. 28ರ ತೀರ್ಪು ಅನುಷ್ಠಾನಗೊಳಿಸುವಂತೆ ‘ಅಹಿಂಸಾ’ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ) ನೌಕರರ ಒಕ್ಕೂಟ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೆ, ‘ಸುಪ್ರೀಂ ಕೋರ್ಟ್‌ ಮಧ್ಯಂತರ ಅಭಿಪ್ರಾಯ ನೀಡಿದೆ. ಅದನ್ನು ಆಧರಿಸಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು’ ಎಂದುಮುಖ್ಯ ಕಾರ್ಯದರ್ಶಿಗೆ ರಾಜ್ಯ ಸರ್ಕಾರಿಎಸ್‌ಸಿ, ಎಸ್‌ಟಿ ನೌಕರರ ಸಂಘಮನವಿಯನ್ನು ಸಲ್ಲಿಸಿದೆ.


****

ಡಿ. ಚಂದ್ರಶೇಖರಯ್ಯ

'ಸುಪ್ರೀಂಕೋರ್ಟ್‌ ಆದೇಶ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ರಾಜ್ಯದಲ್ಲಿ ಜ್ಯೇಷ್ಠತೆ ಸಂರಕ್ಷಣೆ ಕಾಯ್ದೆ ಜಾರಿಯಲ್ಲಿದೆ. ಕೋರ್ಟ್‌ನ ಈ ಆದೇಶ ಆಧರಿಸಿ ಕ್ರಮ ತೆಗೆದುಕೊಳ್ಳಬಾರದು'.

-ಡಿ. ಚಂದ್ರಶೇಖರಯ್ಯ, ಅಧ್ಯಕ್ಷ, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ

*****

ಪಿ. ರವಿಕುಮಾರ್‌

'ಸುಪ್ರೀಂ ಆದೇಶದ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಅಡ್ವೊಕೇಟ್‌ ಜನರಲ್‌ ಅವರಿಂದ ನನಗೆ ಯಾವುದೇ ಸ್ಪಷ್ಟನೆ ಬಂದಿಲ್ಲ. ಸರ್ಕಾರ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ'

-ಪಿ. ರವಿಕುಮಾರ್‌, ಮುಖ್ಯ ಕಾರ್ಯದರ್ಶಿ

****

ಎಂ. ನಾಗರಾಜ್‌

'ತೀರ್ಪನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಅನೇಕ ಇಲಾಖೆಗಳಲ್ಲಿ ಎಸ್‌ಸಿ, ಎಸ್‌ಟಿ ಪ್ರಾತಿನಿಧ್ಯ ಶೇ 18ಕ್ಕಿಂತ ಹೆಚ್ಚು, ಕೆಲವು ಇಲಾಖೆಗಳಲ್ಲಿ ಶೇ 60, 70 ಇದೆ.'

-ಎಂ. ನಾಗರಾಜ್‌, ಅಧ್ಯಕ್ಷ, ಅಹಿಂಸಾ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.