ADVERTISEMENT

ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 8:58 IST
Last Updated 14 ಅಕ್ಟೋಬರ್ 2025, 8:58 IST
<div class="paragraphs"><p>ಕರ್ನಾಟಕ ಹೈಕೋರ್ಟ್, ಕೆ.ವೈ. ನಂಜೇಗೌಡ, ಸುಪ್ರೀಂ ಕೋರ್ಟ್</p></div>

ಕರ್ನಾಟಕ ಹೈಕೋರ್ಟ್, ಕೆ.ವೈ. ನಂಜೇಗೌಡ, ಸುಪ್ರೀಂ ಕೋರ್ಟ್

   

ನವದೆಹಲಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಅವರ ಆಯ್ಕೆ ರದ್ದುಪಡಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ. 

ಹೈಕೋರ್ಟ್ ಆದೇಶ ಪ್ರಶ್ನಿಸಿ ನಂಜೇಗೌಡ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಜಾಯ್‌ಮಲ್ಯ ಬಾಗ್ಚಿ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ. ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ. 

ADVERTISEMENT

ಹೈಕೋರ್ಟ್‌ ಆದೇಶದ ಪ್ರಕಾರ, ಮತಗಳ ಮರುಎಣಿಕೆ ನಡೆಸಿ, ಫಲಿತಾಂಶದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ‍ಪೀಠ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್‌ನ ಅನುಮತಿಯಿಲ್ಲದೆ ಮರುಎಣಿಕೆಯ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂದು ಪೀಠ ತಾಕೀತು ಮಾಡಿದೆ. 

ನಂಜೇಗೌಡ ಪರ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ ವಾದ ಮಂಡಿಸಿದರು. 

‘ಮತ ಎಣಿಕೆ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿಲ್ಲ. ಸಾಕಷ್ಟು ಅಕ್ರಮ ಎಸಗಲಾಗಿದೆ’ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಬಿಜೆಪಿಯ ಕೆ.ಎಸ್.ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. 

‘ಈ ಕ್ಷೇತ್ರದ ಮತಗಳನ್ನು ನಾಲ್ಕು ವಾರಗಳಲ್ಲಿ ಪುನಃ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು. ಅದರಲ್ಲಿ ಯಾರು ಹೆಚ್ಚು ಮತಗಳಿಸಿದವರು ಎಂದು ಕಂಡುಬರುತ್ತದೆಯೋ ಅಂಥವರನ್ನು ಆಯ್ಕೆಯಾದ ಅಭ್ಯರ್ಥಿ ಎಂದು ಘೋಷಿಸಬೇಕು’ ಎಂದು ನ್ಯಾಯಪೀಠವು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. 

‘ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ 15 ಸ್ಪರ್ಧಿಗಳ ಏಜೆಂಟರುಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಮತಗಳ ಎಣಿಕೆ ಒಂದೇ ಕೊಠಡಿಯಲ್ಲಿ ನಡೆಯಬೇಕಿತ್ತು. ಆದರೆ, ಎರಡು ಪ್ರತ್ಯೇಕ ಕೊಠಡಿಗಳಲ್ಲಿ ನಡೆದಿದೆ. ಈ ಮೂಲಕ ಜನಪ್ರಾತಿನಿಧ್ಯ ಕಾಯ್ದೆ-1951 ಮತ್ತು ಚುನಾವಣಾ ಆಯೋಗ ಪ್ರಕಟಿಸಿದ್ದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ನಂಜೇಗೌಡ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಚುನಾವಣಾ ಆಯೋಗದ ಕ್ರಮವನ್ನು ರದ್ದುಪಡಿಸಬೇಕು. ಮತಗಳ ಮರು ಎಣಿಕೆಗೆ ನಿರ್ದೇಶಿಸಬೇಕು‘ ಎಂದು ಮಂಜುನಾಥ್‌ ಗೌಡ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.