ADVERTISEMENT

ಅಭಿಪ್ರಾಯಕ್ಕೆ ಸಹಮತ ಇಲ್ಲ, ಭಾವನೆಗೆ ಗೌರವವಿದೆ: ಸಾಹಿತಿ ದೇವನೂರಗೆ ಸಚಿವರ ಪತ್ರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:09 IST
Last Updated 3 ಮಾರ್ಚ್ 2020, 19:09 IST
ಎಸ್‌.ಸುರೇಶ್‌ ಕುಮಾರ್‌
ಎಸ್‌.ಸುರೇಶ್‌ ಕುಮಾರ್‌   

ಬೆಂಗಳೂರು: ‘ಆಡಬಾರದ ಮಾತನ್ನಾಡಿದರೆ, ಕೇಳಬಾರದ ಮಾತು ಕೇಳಬಾಕಾಗುತ್ತದೆ’ ಎಂಬ ತಮ್ಮ ಹೇಳಿಕೆಗೆ ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ಪತ್ರಕ್ಕೆ ಉತ್ತರ ಬರೆದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ‘ನನ್ನ ಹೇಳಿಕೆ ಒಬ್ಬ ವ್ಯಕ್ತಿಯ ಕುರಿತಲ್ಲ. ಬದಲಿಗೆ ಇಂದಿನ ವಾಸ್ತವ ಪರಿಸ್ಥಿತಿಯ ಕುರಿತು’ ಎಂದು ಹೇಳಿದ್ದಾರೆ.

‘ನಿಮ್ಮ ಪತ್ರವನ್ನು ನಾಲ್ಕೈದು ಬಾರಿ ವಿವರವಾಗಿ ಓದಿದೆ. ನೀವು ವ್ಯಕ್ತ‌‌ಪಡಿಸಿರುವ ಅಭಿಪ್ರಾಯಗಳ‌ ಪೈಕಿ ಕೆಲವಕ್ಕೆ ನನ್ನ ಸಹಮತವಿಲ್ಲದಿದ್ದರೂ ನಿಮ್ಮ ಭಾವನೆಯನ್ನು ನಾನು ಪೂರ್ಣ ಗೌರವಿಸುತ್ತೇನೆ’ ಎಂದು ಹೇಳಿದ್ದಾರೆ.

‘ಎಚ್.ಎಸ್.ದೊರೆಸ್ವಾಮಿಯವರನ್ನು ನಾನು ಅನೇಕ‌ ದಶಕಗಳಿಂದ‌ ನೋಡಿಕೊಂಡು ಬಂದಿದ್ದೇನೆ, ಬೆಳೆದಿದ್ದೇನೆ. ಅವರ ಹಿರಿತನ, ಸಾಮಾಜಿಕ ಕಾಳಜಿಯ ಕುರಿತು ನನಗೆ ಗೌರವವಿದೆ. ಅಂತಹ ಹಿರಿಯ ಸ್ಥಾನದ ವ್ಯಕ್ತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ ಉಪಯೋಗಿಸುವ ಪದಗಳು ಬಹುಮುಖ್ಯ. ಸೈದ್ಧಾಂತಿಕವಾಗಿ ತಾವು ವಿರೋಧಿಸುವರ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತ‌ಪಡಿಸಲು ಅವರಿಗೆ ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದನ್ನು ವ್ಯಕ್ತಪಡಿಸುವ ಪರಿಭಾಷೆಯ ಕುರಿತು ಸ್ವಲ್ಪ ಗಮನ ಹರಿಸಬೇಕಿತ್ತು’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ನರೇಂದ್ರ ಮೋದಿಯವರ ಕುರಿತು, ಸಾವರ್ಕರ್ ಕುರಿತು ನಿಮಗೆ ನಿಮ್ಮದೇ ಆದ ಅಭಿಪ್ರಾಯ ‌ಇರುವುದು‌ ಎಷ್ಟು‌ ಸಹಜವೋ, ನನಗೂ ನನ್ನದೇ ಆದ ಅಭಿಪ್ರಾಯ ಇರುವುದೂ ಸಹಜ‌. ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಮಾತುಗಳಿಗೆ ಲಂಗುಲಗಾಮೇ ಇರದ ಈ ಕಾಲದಲ್ಲಿ ಪ್ರಮುಖರು ಉಪಯೋಗಿಸುವ ಪದಗಳು ಇನ್ನಷ್ಟು ಸ್ವೇಚ್ಛಾಚಾರಕ್ಕೆ ಇಂಬು ನೀಡಬಾರದು.‌ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಭಾಪ್ರಜ್ಞೆ, ಸಂದರ್ಭಪ್ರಜ್ಞೆ ಗಳಿಗೆ ಮಹತ್ವವಿರಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.