ADVERTISEMENT

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ರಜೆ ಸರಿದೂಗಿಸಲು ಹೆಚ್ಚುವರಿ ಅವಧಿ ಪಾಠ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 15:49 IST
Last Updated 8 ನವೆಂಬರ್ 2025, 15:49 IST
   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಹತ್ತು ದಿನಗಳು ವಿಸ್ತರಿಸಿದ್ದ ದಸರಾ ರಜೆಯನ್ನು ಸರಿದೂಗಿಸಲು ಮುಂದಾಗಿರುವ ಶಾಲಾ ಶಿಕ್ಷಣ ಇಲಾಖೆ, ಪ್ರತಿದಿನ ಒಂದು ಅವಧಿ ಹೆಚ್ಚುವರಿ ಪಾಠ ಮಾಡುವಂತೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸೂಚಿಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಈ ಬಗ್ಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗಿದೆ. ಪ್ರಾಥಮಿಕ ಶಾಲೆಗಳು 2026ರ ಫೆಬ್ರವರಿ 5ರವರೆಗೆ ಹಾಗೂ ಪ್ರೌಢಶಾಲೆಗಳು ಜನವರಿ 24ರವರೆಗೆ ಹೆಚ್ಚುವರಿ ಪಾಠಗಳನ್ನು ನಡೆಸಬೇಕು. ಬೆಳಿಗ್ಗೆ ಅಥವಾ ಸಂಜೆ ಯಾವ ಸಮಯ ಹೊಂದಾಣಿಕೆಯಾಗುತ್ತದೆ ಎನ್ನುವುದನ್ನು ಆಯಾ ಶಾಲಾ ಮುಖ್ಯಸ್ಥರೇ ನಿರ್ಧಾರ ಮಾಡಬೇಕು ಎಂದು ಸೂಚಿಸಲಾಗಿದೆ.

ದಸರಾ ರಜೆಗಳನ್ನು ಶೈಕ್ಷಣಿಕ ವೇಳಾಪಟ್ಟಿಯಂತೆ ಸೆ.22ರಿಂದ ಅ.7ರವರೆಗೆ ನಿಗದಿ ಮಾಡಲಾಗಿತ್ತು. ಸರ್ಕಾರ ಸಮೀಕ್ಷೆಯನ್ನು ಅ.16ರವರೆಗೆ ವಿಸ್ತರಿಸಿದ್ದರಿಂದ ದೀಪಾವಳಿ ನಂತರ ಶಾಲೆಗಳು ಪುನರ್‌ ಆರಂಭವಾಗಿದ್ದವು. ಹಾಗಾಗಿ, ಎಂಟು ಪೂರ್ಣ ದಿನಗಳು ಮತ್ತು ಎರಡು ಅರ್ಧ ದಿನಗಳು (ಶನಿವಾರ) ವ್ಯರ್ಥವಾಗಿವೆ. ಒಂದು ಅವಧಿ 40–45 ನಿಮಿಷ. ಈ ಆಧಾರದಲ್ಲಿ ಪ್ರೌಢ ಶಾಲೆಗಳಲ್ಲಿ 66 ಮತ್ತು ಪ್ರಾಥಮಿಕ ಶಾಲೆಗಳಲ್ಲಿ 74 ಅವಧಿ ಕಡಿಮೆಯಾಗಿವೆ ಎಂದು ಇಲಾಖೆ ಲೆಕ್ಕಹಾಕಿದೆ.  

ADVERTISEMENT

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಜನವರಿಯಿಂದ ಮಾರ್ಚ್‌ವರೆಗೆ ವಿಶೇಷ ತರಗತಿಗಳನ್ನು ನಡೆಸುವಂತೆಯೂ ಇಲಾಖೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.