ADVERTISEMENT

ಅಲೆಮಾರಿಗಳ ಸಮೀಕ್ಷೆ ದೇಶದಾದ್ಯಂತ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 21:00 IST
Last Updated 1 ಆಗಸ್ಟ್ 2022, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‘ಅಲೆಮಾರಿಗಳನ್ನು ಗುರುತಿಸಿ, ವರ್ಗೀಕರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಕರ್ನಾಟಕದಲ್ಲೂ ಶೀಘ್ರ ಸಮೀಕ್ಷೆ ನಡೆಯಲಿದೆ’ ಎಂದುಕೇಂದ್ರದ ಅಧಿಸೂಚಿತ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಬಿಕ್ಕು ರಾಮ್‌ ಜೀ ಇದಾತೆ ತಿಳಿಸಿದರು.

‘ನೀತಿ ಆಯೋಗವು ಸಮೀಕ್ಷೆ ಕಾರ್ಯ ಕೈಗೊಂಡಿದೆ.ಸುಮಾರು 265 ಅಲೆಮಾರಿ ಸಮುದಾಯಗಳನ್ನು ಗುರುತಿಸುವ ಮತ್ತು ವರ್ಗೀಕರಣ ಕೈಗೊಳ್ಳುವ ಕಾರ್ಯ ಇದುವರೆಗೆ ನಡೆದಿರಲಿಲ್ಲ. ಈಗಾಗಲೇ 100 ಸಮುದಾಯಗಳನ್ನು ಗುರುತಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅಕ್ಟೋಬರ್‌ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

’ಕೇಂದ್ರ ಸರ್ಕಾರ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಮೊದಲ ಹಂತದಲ್ಲಿ ₹200 ಕೋಟಿ ಬಜೆಟ್‌ನಲ್ಲಿ ಮೀಸಲಿರಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಭರವಸೆ ಸರ್ಕಾರ ನೀಡಿದೆ’ ಎಂದು ತಿಳಿಸಿದರು.‘2018ರಲ್ಲಿ ಅಲೆಮಾರಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಆಯೋಗ ನೀಡಿರುವ 20 ಶಿಫಾರಸುಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ 12 ಅಂಶಗಳನ್ನು ಅನುಷ್ಠಾನಗೊಳಿಸಲಾಗಿದೆ. ಉಳಿದ ಶಿಫಾರಸುಗಳು ಕಾನೂನು ವಿಷಯಗಳಿಗೆ ಸಂಬಂಧಿಸಿದ್ದಾಗಿವೆ’ ಎಂದು ವಿವರಿಸಿದರು.

ADVERTISEMENT

‘ಕೇಂದ್ರ ಸರ್ಕಾರ ಅಧಿಸೂಚಿತ ಅಲೆಮಾರಿಗಳಿಗಾಗಿ ಆರ್ಥಿಕ ಸಬಲೀಕರಣ ಯೋಜನೆ(ಎಸ್‌ಇಇಡಿ) ಜಾರಿಗೊಳಿಸಿದೆ. ಈ ಯೋಜನೆ ಅಡಿಯಲ್ಲಿ ಮನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ, ಅಲೆಮಾರಿಗಳ ಸಂಸ್ಕೃತಿ ಉಳಿಸಿ ಪೋಷಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ’ ಎಂದು ವಿವರಿಸಿದರು.

‘ಕರ್ನಾಟಕದಲ್ಲಿಪರಿಶಿಷ್ಟ ಜಾತಿಯಲ್ಲಿ 51 ಅಲೆಮಾರಿ ಜಾತಿಗಳಿದ್ದು, ಆರು ಲಕ್ಷ ಜನಸಂಖ್ಯೆ ಹೊಂದಿದೆ. ಪರಿಶಿಷ್ಟ ಪಂಗಡದಲ್ಲಿ 23 ಜಾತಿಗಳಿದ್ದು, 3 ಲಕ್ಷ ಜನಸಂಖ್ಯೆ ಇದೆ. ಇತರ ಹಿಂದುಳಿದ ವರ್ಗಗಳಲ್ಲಿ 46 ಜಾತಿಗಳಿದ್ದು, 9 ಲಕ್ಷ ಜನಸಂಖ್ಯೆ ಇದೆ’ ಎಂದು ವಿವರಿಸಿದರು. ಮಂಡಳಿಯ ಸದಸ್ಯ ಕೆ. ಭಾಸ್ಕರ್‌ ದಾಸ್‌, ‘ಅಲೆಮಾರಿಗಳಿಗೆ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ, ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಅಲೆಮಾರಿಗಳಿಗೆ ಪ್ರತ್ಯೇಕ ಮಂಡಳಿ ಸ್ಥಾಪಿಸಿ’

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಲ್ಲಿನ ಅಲೆಮಾರಿ ಸಮುದಾಯಗಳಿಗಾಗಿಯೇ ಪ್ರತ್ಯೇಕವಾದ ಮಂಡಳಿ ಸ್ಥಾಪಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ನಗರದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಗಮನಸೆಳೆದ ಅವರು,ವಸತಿ ಸೌಲಭ್ಯ ಕಲ್ಪಿಸಬೇಕು ಮತ್ತು ಜೀವನೋಪಾಯಕ್ಕೂ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.