
ಬೆಳಗಾವಿಯ ಸುವರ್ಣ ವಿಧಾನಸೌಧ
ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನಸಭೆಯಲ್ಲಿ ಮಸೂದೆಗಳನ್ನು ಮಂಡಿಸುವ ವೇಳೆ ಮೈಕ್ ಕೈಕೊಟ್ಟಿದ್ದರಿಂದ ಕಲಾಪವನ್ನು ಸುಮಾರು 20 ನಿಮಿಷಗಳ ಕಾಲ ಮುಂದೂಡಿದ ಘಟನೆ ನಡೆಯಿತು.
ಸಚಿವ ಸಂತೋಷ್ ಲಾಡ್ ಅವರು ಮಸೂದೆ ಮಂಡಿಸುತ್ತಿದ್ದಾಗ ಮೈಕ್ ಕೆಟ್ಟು ಹೋಗಿ ಯಾರಿಗೂ ಏನೂ ಕೇಳದ ಸ್ಥಿತಿ ನಿರ್ಮಾಣವಾಯಿತು. ಆಗ ಬಿಜೆಪಿ ಸದಸ್ಯರು, ‘ಇಲ್ಲಿ ಮೈಕ್ ಸದ್ದು ಇಲ್ಲ, ಸರ್ಕಾರದ ಸದ್ದೂ ಅಡಗಿ ಹೋಗಿದೆ. ಮೈಕ್‌ನಂತೆ ಸರ್ಕಾರವೂ ಗುಂಯ್ ಎಂದು ಸದ್ದು ಮಾಡುತ್ತಿದೆ’ ಎಂದು ಲೇವಡಿ ಮಾಡಿದರು.
‘ವಿರೋಧ ಪಕ್ಷಗಳ ಸದ್ದಡಗಿಸಲು ಮೈಕ್ ಆಫ್ ಮಾಡಿರಬೇಕು’ ಎಂದೂ ಟೀಕಿಸಿದರು. ಸದನದಲ್ಲಿ ಸದಸ್ಯರು ಮಾತನಾಡಿದ್ದು ಕೇಳದ ಸ್ಥಿತಿ ನಿರ್ಮಾಣವಾದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗ 20 ನಿಮಿಷ ಕಳೆದಿತ್ತು.
ಕಪ್ಪು ಪಟ್ಟಿ ಧರಿಸಿ ಬಂದ ಬೆಲ್ಲದ
ಉತ್ತರ ಕರ್ನಾಟಕದ ಕುರಿತು ಚರ್ಚೆ ನಡೆಸುವ ವೇಳೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರು ತೋಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಬಂದಿದ್ದನ್ನು ಸಭಾಧ್ಯಕ್ಷ ಖಾದರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬೆಲ್ಲದ, ‘ಕಳೆದ ವರ್ಷ ಇದೇ ದಿನ ಸುವರ್ಣ ವಿಧಾನಸೌಧದ ಸಮೀಪ ಲಿಂಗಾಯತರ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಅದರ ಬಗ್ಗೆ ತನಿಖೆ ನಡೆಸಿಲ್ಲ. ಆ ಘಟನೆ ಖಂಡಿಸಿ ಕಪ್ಪು ಪಟ್ಟಿ ಧರಿಸಿದ್ದೇನೆ’ ಎಂದು ಹೇಳಿದರು.
ಆಗ ನಿಯಮ ಉಲ್ಲೇಖಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ‘ಸದನದ ಒಳಗೆ ಬಾವುಟ, ಲಾಂಛನ, ನಿಶಾನೆಗಳನ್ನು ಪ್ರದರ್ಶಿಸುವಂತಿಲ್ಲ. ಸದಸ್ಯರು ನಿಯಮ ಪಾಲಿಸಬೇಕು’ ಎಂದು ಮನವಿ ಮಾಡಿದ ಬಳಿಕ ಬೆಲ್ಲದ ಕಪ್ಪು ಪಟ್ಟಿಯನ್ನು ಬಿಚ್ಚಿಟ್ಟರು.