ಬೆಂಗಳೂರು: ‘ತೌತೆ’ ಚಂಡಮಾರುತದ ಪ್ರಭಾವ ರಾಜ್ಯದಲ್ಲಿ ಸೋಮವಾರ ತಗ್ಗಿದ್ದು, ಎರಡು ದಿನಗಳ ಮಳೆ, ಗಾಳಿಯ ಆರ್ಭಟಕ್ಕೆ ಏಳು ಜಿಲ್ಲೆಗಳ 121 ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ.
ಶನಿವಾರ ಮತ್ತು ಭಾನುವಾರ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಗಾಳಿ, ಮಳೆಯ ಅಬ್ಬರ ಜೋರಾಗಿತ್ತು. ಇದರಿಂದ ಎಂಟು ಮಂದಿ ಸಾವಿಗೀಡಾಗಿದ್ದರು. ಭಾನುವಾರ ಸಂಜೆಯಿಂದ ಮಳೆಯ ಪ್ರಮಾಣ ತಗ್ಗಿದೆ. ಸೋಮವಾರ ಎಲ್ಲ ಕಡೆ ಮಳೆ ಕಡಿಮೆಯಾಗಿದೆ.
ಕಂದಾಯ ಇಲಾಖೆ ಸೋಮವಾರ ನೀಡಿರುವ ಪರಿಷ್ಕೃತ ವರದಿ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ 48, ಉಡುಪಿಯ 32, ದಕ್ಷಿಣ
ಕನ್ನಡದ 28, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ತಲಾ ಐದು, ಬೆಳಗಾವಿಯ ಎರಡು ಮತ್ತು ಹಾಸನದ ಒಂದು ಗ್ರಾಮಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿದೆ.
ಚಂಡಮಾರುತದಿಂದ ಈವರೆಗೆ ರಾಜ್ಯದ ವಿವಿಧೆಡೆ ಎಂಟು ಮಂದಿ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಶನಿವಾರ ಮುಳಗಿದ್ದ ಟಗ್‌ನಲ್ಲಿದ್ದ ಮೂವರ ಸುಳಿವು ಇನ್ನೂ ಸಿಕ್ಕಿಲ್ಲ. ಮೂಲ್ಕಿ ಬಳಿ ಸಮುದ್ರದಲ್ಲಿ ಬಂಡೆಗಳ ನಡುವೆ ಸಿಲುಕಿರುವ ಕೋರಮಂಡಲ್ ಸಪೋರ್ಟರ್–9 ಟಗ್‌ನಲ್ಲಿದ್ದ ಎಲ್ಲ ಒಂಬತ್ತು ಜನರನ್ನು ನೌಕಾಪಡೆಯ ಹೆಲಿಕಾಪ್ಟರ್ ನೆರವಿನಿಂದ ರಕ್ಷಿಸಲಾಗಿದೆ.
387 ಮನೆಗಳಿಗೆ ಹಾನಿ: ‘ಒಟ್ಟು 387 ಮನೆಗಳಿಗೆ ಹಾನಿಯಾಗಿದೆ. 57 ಮನೆಗಳು ಸಂಪೂರ್ಣ, 330 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೇ 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ’ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಮಳೆ, ಗಾಳಿಯಿಂದ 30 ಹೆಕ್ಟೇರ್ ಕೃಷಿ ಜಮೀನು ಮತ್ತು 2.87 ಹೆಕ್ಟೇರ್ ವಿಸ್ತೀರ್ಣದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. 56.2 ಕಿ.ಮೀ. ಉದ್ದದ ರಸ್ತೆಗಳು ಮಳೆಯಿಂದ ಕೊಚ್ಚಿಹೋಗಿವೆ ಎಂದು ಕಂದಾಯ ಇಲಾಖೆಯ ವರದಿ ತಿಳಿಸಿದೆ.
711 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 153 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. 9,203 ಮೀಟರ್ ಉದ್ದದ ವಿದ್ಯುತ್ ಮಾರ್ಗಗಳು ತುಂಡಾಗಿವೆ.
ಮೀನುಗಾರರಿಗೆ ಭಾರಿ ನಷ್ಟ:ಚಂಡಮಾರುತದಿಂದ ಕರಾವಳಿಯ ಮೀನುಗಾರರಿಗೆ ಭಾರಿ ನಷ್ಟವಾಗಿದೆ. ಮೂರೂ ಜಿಲ್ಲೆಗಳಲ್ಲಿ ಒಟ್ಟು 116 ಮೀನುಗಾರಿಕಾ ದೋಣಿಗಳು ಮತ್ತು 57 ಬಲೆಗಳು ಕಡಲಿನ ಅಬ್ಬರದಿಂದ ಧ್ವಂಸಗೊಂಡಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 97, ಉಡುಪಿಯಲ್ಲಿ 18 ಮತ್ತು ದಕ್ಷಿಣ ಕನ್ನಡದಲ್ಲಿ ಒಂದು ಮೀನುಗಾರಿಕಾ ದೋಣಿಗಳಿಗೆ ಹಾನಿಯಾಗಿದೆ ಎಂಬ ಅಂಶ ನಷ್ಟದ ಪ್ರಾಥಮಿಕ ಅಂದಾಜು ವರದಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.