ADVERTISEMENT

ತೆರಿಗೆ ವಂಚನೆ: ಮೈಸೂರು, ಬೆಂಗಳೂರು ಸೇರಿ ಹಲವೆಡೆ ಐಟಿ ದಾಳಿ, ಶೋಧ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 23:30 IST
Last Updated 5 ಫೆಬ್ರುವರಿ 2025, 23:30 IST
<div class="paragraphs"><p>ಮೈಸೂರಿನ ಉದ್ಯಮಿ ಜಯಕೃಷ್ಣ ಅವರ ರಾಮಕೃಷ್ಣನಗರದ ಮನೆಯಲ್ಲಿ&nbsp;ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಶೋಧ ನಡೆಸಿದರು&nbsp; &nbsp;</p></div>

ಮೈಸೂರಿನ ಉದ್ಯಮಿ ಜಯಕೃಷ್ಣ ಅವರ ರಾಮಕೃಷ್ಣನಗರದ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಶೋಧ ನಡೆಸಿದರು   

   

 ಪ್ರಜಾವಾಣಿ ಚಿತ್ರ.

ಬೆಂಗಳೂರು/ಮೈಸೂರು: ಆದಾಯ ತೆರಿಗೆ ವಂಚನೆ ಸಂಬಂಧ ಮೈಸೂರು ಮತ್ತು ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ.

ADVERTISEMENT

10 ಕಾರುಗಳಲ್ಲಿ ಬಂದಿಳಿದ ಐವತ್ತು ಮಂದಿ ಅಧಿಕಾರಿಗಳು, ಪ್ರಥಮ ದರ್ಜೆ ಗುತ್ತಿಗೆದಾರ, ಗುತ್ತಿಗೆದಾರ ಮತ್ತು ಇತರ ಉದ್ಯಮಿಗಳಿಗೆ ಸೇರಿದ ಮನೆ, ಕಚೇರಿ ಮತ್ತು ಆಪ್ತ ಮನೆಗಳ ಮೇಲೆ ದಾಳಿ ನಡೆಸಿದರು. ಮನೆ, ಕಚೇರಿಗಳ ಆವರಣದಲ್ಲಿದ್ದ ವಾಹನಗಳನ್ನೂ ತಪಾಸಣೆ ನಡೆಸಿ, ಅವುಗಳಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಆದಾಯ ತೆರಿಗೆ ಸಲ್ಲಿಕೆಗೆ ಸಂಬಂಧಿಸಿದಂತೆ ದತ್ತಾಂಶಗಳು ತಾಳೆಯಾಗದ ಕಾರಣ ಈ ಉದ್ಯಮಿಗಳ ಬ್ಯಾಂಕ್‌ ವಹಿವಾಟನ್ನು ಪರಿಶೀಲಿಸಲಾಗಿತ್ತು. ಅವುಗಳಲ್ಲಿ ಕೆಲವು ವರ್ಗಾವಣೆಗಳ ದಾಖಲೆಗಳನ್ನು ಅವರು ನಮೂದಿಸಿರಲಿಲ್ಲ. ಮೂವರು ಉದ್ಯಮಿಗಳ ಪ್ರಕರಣದಲ್ಲೂ ಹೀಗೇ ಆಗಿದೆ. ಅವೆಲ್ಲವನ್ನೂ ಖಚಿತಪಡಿಸಿಕೊಂಡೇ ಶೋಧ ಕಾರ್ಯಾಚರಣೆ ರೂಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ಕೆಲವು ಪ್ರಮುಖ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಜಯಕೃಷ್ಣ ಅಲಿಯಾಸ್ ರಾಮಕೃಷ್ಣೇಗೌಡ ಅವರ ಮನೆ ಮತ್ತು ಕಚೇರಿಗಳ ತಪಾಸಣೆ ನಡೆಸಲಾಗಿದೆ. ಜಯಕೃಷ್ಣ ಅವರ ಕಂಪನಿಯ ಸಿಬ್ಬಂದಿ ಮತ್ತು ಆಪ್ತರಿಗೆ ಸಂಬಂಧಿಸಿದ ಬೆಂಗಳೂರಿನ ಸ್ಥಳಗಳಲ್ಲೂ ಶೋಧ ನಡೆಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. 

ಜಯಕೃಷ್ಣ ಅವರು ಇಟ್ಟಿಗೆ ತಯಾರಿಕೆ ಕಾರ್ಖಾನೆಯನ್ನೂ ಹೊಂದಿದ್ದಾರೆ. ತಾವು ಗುತ್ತಿಗೆ ಪಡೆದ ಕಾಮಗಾರಿಗಳಲ್ಲಿ ಆ ಇಟ್ಟಿಗೆಗಳನ್ನೂ ಬಳಸುತ್ತಿದ್ದು, ಅದರ ವಹಿವಾಟಿನ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆಯಾಗಿದೆ. ಹಲವು ವಹಿವಾಟುಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ ಮಾಡಿಲ್ಲ ಎಂದು ಗೊತ್ತಾಗಿದೆ.

ಇದಲ್ಲದೇ ಅವರು ಇತರೆ ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಾವ ಹಾಗೂ ಸ್ಥಳೀಯ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮೈಸೂರಿನಲ್ಲಿ ಹೋಟೆಲ್‌ ಮತ್ತು ಕಲ್ಯಾಣ ಮಂಟಪಗಳನ್ನು ನಡೆಸುತ್ತಿರುವ ಉದ್ಯಮಿ ಕಾಂತರಾಜು ಅವರ ಮನೆ, ಎಂಪ್ರೋ ಹೋಟೆಲ್‌ ಮತ್ತು ಅವರ ಇಬ್ಬರು ಪಾಲುದಾರರಾದ ಹರಿಕುಮಾರ್, ಹರಿಬಾಬು ಅವರ ಮಾಲೀಕತ್ವದ ಆಲನಹಳ್ಳಿಯಲ್ಲಿರುವ ಹೋಟೆಲ್ ಮೇಲೂ ದಾಳಿ ನಡೆದಿದೆ. ವಿಜಯನಗರ 3ನೇ ಹಂತದ ನಿವಾಸಿಯಾದ ಉದ್ಯಮಿ ರಮೇಶ್ ಅವರ ಮನೆ ಹಾಗೂ ಕಚೇರಿಯಲ್ಲಿಯೂ ತಪಾಸಣೆ ನಡೆಸಲಾಗಿದೆ.

ತೆರಿಗೆ ವಂಚನೆಯನ್ನು ಸಾಬೀತುಮಾಡುವ ಹಲವು ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಉದ್ಯಮಿಗಳಿಂದ ವಿವರಣೆ ಕೇಳಲಾಗಿದೆ. ಕೆಲವೆಡೆ ಇನ್ನೂ ತಪಾಸಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯಮಿ ಕಾಂತರಾಜು ಅವರ ಎಂಪ್ರೋ ಹೋಟೆಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.