ಬೆಂಗಳೂರು: ಬೆಂಗಳೂರಿನ ಜನಸಂಖ್ಯೆ 2030 ರಿಂದ 2050 ರ ವೇಳೆಗೆ 3 ಕೋಟಿಗೆ ಏರಲಿದ್ದು, ಕುಡಿಯುವ ನೀರಿನ ಅಭಾವ ತಪ್ಪಿಸಲು ಮೇಕೆದಾಟು ಯೋಜನೆ ಜಾರಿ ಅನಿವಾರ್ಯ ಎಂದು ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ವಿಧಾನಸಭೆಯಲ್ಲಿ ಪ್ರತಿಪಾದಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಅವರು, ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಲು ಎಲ್ಲರೂ ಒಗ್ಗಟ್ಟಾಗಿ ಕೇಂದ್ರದ ಬಳಿ ಹೋಗಬೇಕು ಎಂದರು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಂತರ್ಜಲದ ಪ್ರಮಾಣ ತೀವ್ರವಾಗಿ ಕುಸಿಯುತ್ತಿದೆ. ಪಕ್ಷಭೇದ ಮರೆತು ಈ ಸಮಸ್ಯೆಯ ಬಗ್ಗೆ ಗಮನಹರಿಸಬೇಕಾಗಿದೆ. ಮೇಕೆದಾಟು ಯೋಜನೆ ಜಾರಿ ಆದರೆ 67 ಟಿಎಂಸಿ ಅಡಿ ನೀರು ಸಿಗುತ್ತದೆ. ಬೆಂಗಳೂರು ಅಲ್ಲದೇ, ಸುತ್ತಮುತ್ತಲಿನ ಜಿಲ್ಲೆಗಳಿಗೂ ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ ಎಂದರು.
ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡಲು ಏಳು ಫುಡ್ ಪಾರ್ಕ್ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ ಈ ಯೋಜನೆ ನನೆಗುದಿಗೆ ಬಿದ್ದಿರುವುದು ದುರದೃಷ್ಟಕರ ಸಂಗತಿ. ಯೋಜನೆ ಮುಂದುವರೆಸಲು ಅಗತ್ಯ ಹಣಕಾಸಿನ ನೆರವು ನೀಡಬೇಕು. ಇದರಿಂದ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವುದರ ಜತೆಗೆ, ವಿದೇಶಿ ವಿನಿಮಯವೂ ಸಿಗಲಿದೆ ಜಯಚಂದ್ರ ಹೇಳಿದರು.
ಕೆರಳಿದ ನಯನಾ ಮೋಟಮ್ಮ
ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡುತ್ತಿದೆ ಮತ್ತು ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಕಾಂಗ್ರೆಸ್‌ನ ನಯನಾ ಮೋಟಮ್ಮ ಆರೋಪಿಸಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ನಯನಾ ಅವರ ಆರೋಪಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಜತೆ ವಾಗ್ವಾದ ನಡೆಸಿದರು. ‘ನಯನಾ ಅವರು ಮೊದಲ ಬಾರಿಗೆ ಶಾಸಕಿಯಾಗಿದ್ದಾರೆ. ಮಾತನಾಡಲು ಬಿಡಿ’ ಎಂದು ಕಾಂಗ್ರೆಸ್‌ನ ಪಿ.ಎಂ. ನರೇಂದ್ರ ಸ್ವಾಮಿ ಹೇಳಿದರು. ಆಗ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಅವರು ‘ಮೊದಲ ಬಾರಿ ಗೆದ್ದು ಬಂದರೂ ಇತಿ ಮಿತಿಯಲ್ಲಿ ಮಾತನಾಡಬೇಕು’ ಎಂದು ಹೇಳಿದ್ದು ನಯನಾ ಅವರನ್ನು ಕೆರಳಿಸಿತು. ಇತಿಮಿತಿಯಲ್ಲಿ ಮಾತನಾಡಿ ಎನ್ನಲು ಇವರು ಯಾರು ಎಂದು ಸಿಟ್ಟಿನಿಂದ ಏರು ಧ್ವನಿಯಲ್ಲಿ ಬಿಜೆಪಿ ಸದಸ್ಯರ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ನಯನಾ ಅವರನ್ನು ಸಮಾಧಾನಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.