ಪುಷ್ಟಿ ಪೌಡರ್
ಬೆಂಗಳೂರು: ಕ್ಷಯ ರೋಗಿಗಳಿಗೆ ಚಿಕಿತ್ಸೆ ಆರಂಭದ ಎರಡು ತಿಂಗಳು ಪೌಷ್ಟಿಕ ಆಹಾರವಾಗಿ ‘ಪುಷ್ಟಿ ಪೌಡರ್’ ಒದಗಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಇಲಾಖೆಯ ಜಂಟಿ ನಿರ್ದೇಶಕರು (ಕ್ಷಯ) ಸೂಚಿಸಿದ್ದಾರೆ.
ರೋಗಿಯ ದೇಹದ ‘ಬಾಡಿ ಮಾಸ್ ಇಂಡೆಕ್ಸ್ (ದೇಹದ ಸೂಚ್ಯಾಂಕ–ಬಿಎಂಐ) 18ಕ್ಕಿಂತ ಕಡಿಮೆ ಇದ್ದರೆ, ಚಿಕಿತ್ಸೆಯ ಆರಂಭದ ಎರಡು ತಿಂಗಳು ಹೆಚ್ಚುವರಿ ಪೌಷ್ಟಿಕ ಆಹಾರವಾಗಿ ಪುಷ್ಟಿ ಪೌಡರ್ ನೀಡಲು ಸರ್ಕಾರದ ಅನುಮೋದನೆ ದೊರೆತಿದೆ. ಫಲಾನುಭವಿಗೆ ಪ್ರತಿ ತಿಂಗಳು 6 ಕೆ.ಜಿ. ಪುಷ್ಟಿ ಪೌಡರ್ ನೀಡಲು ಅವಕಾಶವಿದೆ ಎಂದು ತಿಳಿಸಲಾಗಿದೆ.
ಗಣಿಬಾಧಿತ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ತುಮಕೂರು ಹೊರತುಪಡಿಸಿ, ರಾಜ್ಯದ ಉಳಿದ ಎಲ್ಲ ಜಿಲ್ಲೆಗಳ ಅರ್ಹ ಫಲಾನುಭವಿಗಳಿಗೆ ಆಯಾ ಅಂಗನವಾಡಿ ಕೇಂದ್ರದ ಮೂಲಕ ಪುಷ್ಟಿ ಪೌಡರ್ ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ.
ಸರಬರಾಜು ಮಾಡಲಾದ ಪುಷ್ಟಿ ಪೌಡರ್‌ನ ಗುಣಮಟ್ಟ ಕೆಡದಂತೆ ದಾಸ್ತಾನು ಮಾಡಬೇಕು. 2025ರ ಆ.1 ರಿಂದ ಹೊಸ ಕ್ಷಯ ರೋಗಿಗಳ ದೇಹದ ತೂಕವನ್ನು ಪರೀಕ್ಷೆ ಮಾಡಿಸಿ, ಅಗತ್ಯ ಅನುಸಾರ ಪುಷ್ಟಿ ಪೌಡರ್ ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.