ADVERTISEMENT

ನೇಮಕಾತಿ ಅಕ್ರಮಪ್ರಕರಣ: ಸಿಐಡಿ ಭಯದಲ್ಲಿ ಸಹ ಶಿಕ್ಷಕರು ನಾಪತ್ತೆ

2012–15ರ ಅವಧಿಯ ನೇಮಕಾತಿ ಅಕ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 18:56 IST
Last Updated 16 ಸೆಪ್ಟೆಂಬರ್ 2022, 18:56 IST
ಸಾಂದರ್ಭಿ ಚಿತ್ರ
ಸಾಂದರ್ಭಿ ಚಿತ್ರ   

ಬೆಂಗಳೂರು: ಪ್ರೌಢಶಾಲೆಗಳ ಗ್ರೇಡ್–2 ಸಹ ಶಿಕ್ಷಕರ ನೇಮಕಾತಿ ಅಕ್ರಮ ಸಂಬಂಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ, ರಾಜ್ಯದ ಹಲವು ಜಿಲ್ಲೆಗಳ ಕೆಲ ಸಹ ಶಿಕ್ಷಕರು ರಜೆ ಪಡೆದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಕಲೆಹಾಕಿರುವ ಸಿಐಡಿ ಅಧಿಕಾರಿಗಳು, ಶಿಕ್ಷಕರ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

2012–13 ಹಾಗೂ 2014–15ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಪ್ರೌಢ) ಅವರು ವಿಧಾನಸೌಧ ಠಾಣೆಗೆ ಇತ್ತೀಚೆಗಷ್ಟೆ ಪ್ರತ್ಯೇಕ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ, 12 ಸಹ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗ ಸಹ ನಿರ್ದೇಶಕ ಕಚೇರಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಕೆ.ಎಸ್. ಪ್ರಸಾದ್ ಅವರನ್ನು ಈಗಾಗಲೇ ಬಂಧಿಸಿದೆ.

‘ತುಮಕೂರು, ಕೋಲಾರ ಹಾಗೂ ವಿಜಯಪುರ ಜಿಲ್ಲೆಯ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಇನ್ನುಳಿದ ಜಿಲ್ಲೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ADVERTISEMENT

‘ಪ್ರಕರಣ ದಾಖಲಾಗುತ್ತಿದ್ದಂತೆ ಈ ಜಿಲ್ಲೆಗಳ ಕೆಲ ಸಹ ಶಿಕ್ಷಕರು, ವೈದ್ಯಕೀಯ ಹಾಗೂ ಇತರೆ ಕಾರಣಗಳನ್ನು ನೀಡಿ ಏಕಾಏಕಿ ಸುದೀರ್ಘ ರಜೆ ಪಡೆದುಕೊಂಡಿದ್ದಾರೆ. ಈ ಪೈಕಿ ಬಹುತೇಕರು ನಾಪತ್ತೆಯಾಗಿದ್ದಾರೆ. ಅವರ‍್ಯಾರೂ ಶಾಲೆಗಳ ಮುಖ್ಯ ಶಿಕ್ಷಕರ ಸಂಪರ್ಕದಲ್ಲಿಲ್ಲ’ ಎಂದು ತಿಳಿಸಿವೆ.

‘ಅಕ್ರಮ ಎಸಗಿರುವ ಸಹ ಶಿಕ್ಷಕರ ಸಂಖ್ಯೆ ಹೆಚ್ಚಿರುವ ಅನುಮಾನವಿದ್ದು, ಪ್ರತಿಯೊಂದು ಶಾಲೆಯ ಸಹ ಶಿಕ್ಷಕರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಅನುಮಾನಾಸ್ಪದ ಸಹ ಶಿಕ್ಷಕರಿಗೆ ದಾಖಲೆ ಹಾಜರುಪಡಿಸುವಂತೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ’ ಎಂದು ತಿಳಿಸಿವೆ.

ಶಿಕ್ಷಣ ಇಲಾಖೆಗೆ ಪತ್ರ: ‘ಜಿಲ್ಲಾವಾರು ನಡೆದಿದ್ದ ನೇಮಕಾತಿಯ ದಾಖಲೆಗಳು ಉಪನಿರ್ದೇಶಕರ ಕಚೇರಿಯಲ್ಲಿವೆ. ಅಂಥ ದಾಖಲೆಗಳ ಸಂಗ್ರಹ ಹಾಗೂ ಪರಿಶೀಲನೆಗಾಗಿ ವಿಶೇಷ ತಂಡ ರಚಿಸಲಾಗಿದೆ. ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ಕಾಲಕಾಲಕ್ಕೆ ಒದಗಿಸುವಂತೆಯೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಬಂಧಿಸುವ ಭಯ?

ಸಹ ಶಿಕ್ಷಕರ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗಿದ್ದ 12 ಸಹ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಶಾಲೆಯಲ್ಲಿ ಬಂಧಿಸಿದ್ದರು. ಇದೇ ಕಾರಣಕ್ಕೆ ಕೆಲ ಸಹ ಶಿಕ್ಷಕರು ಶಾಲೆಗೆ ರಜೆ ಹಾಕಿ ತಲೆಮರೆಸಿಕೊಂಡಿದ್ದಾರೆನ್ನುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.