ಬೆಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಿಕ್ಷಕರಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪಾಠ ಮಾಡಿದರು.
ನಗರದ ದೊಡ್ಡಬೊಮ್ಮಸಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ 1, 2, 3ನೇ ತರಗತಿಯ ಪುಟಾಣಿಗಳು ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉತ್ತಮ ಶಿಕ್ಷಕ ಪ್ರಶಸ್ತಿ, ಮಲೆನಾಡ ಗಾಂಧಿ ಎಚ್.ಜಿ.ಗೋವಿಂದೇಗೌಡ ಪ್ರಶಸ್ತಿ, ನ್ಯಾಕ್ ಮಾನ್ಯತೆ ಪಡೆದ ಸರ್ಕಾರಿ ಕಾಲೇಜುಗಳಿಗೆ ಅಭಿನಂದನಾ ಪತ್ರ ಪ್ರದಾನ ಮಾಡಿ ಮಾತು ಆರಂಭಿಸಿದ ಸಿದ್ದರಾಮಯ್ಯ, ‘ಶಾಲೆಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆಯನ್ನು ಓದಿಸಿದರಷ್ಟೇ ಸಾಲದು. ವಿದ್ಯಾರ್ಥಿಗಳಿಗೆ ಅದನ್ನು ಅರ್ಥಮಾಡಿಸಬೇಕು. ಮಕ್ಕಳು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪರಧರ್ಮ ಸಹಿಷ್ಣತೆ ರೂಢಿಸಿಕೊಳ್ಳುವಂತಾಗಬೇಕು’ ಎಂದರು.
‘ದೇಶದಲ್ಲಿ ಮೊದಲು ಶೂದ್ರರಿಗೆ ಶಿಕ್ಷಣದ ಅವಕಾಶ ಇರಲಿಲ್ಲ. ಜಾತಿವ್ಯವಸ್ಥೆಯ ಕಾರಣಕ್ಕೆ ಅವರಿಗೆ ಶಿಕ್ಷಣ ನಿಷೇಧಿಸಲಾಗಿತ್ತು. ಶಿಕ್ಷಣ ಪಡೆದ ನಂತರ ಜಾತಿ ವ್ಯವಸ್ಥೆ ಹೋಗಬೇಕಾಗಿತ್ತು. ಹೋಗಿದೆಯೇ? ವೈದ್ಯಕೀಯ ಪದವಿ ಪಡೆದವರು, ಡಾಕ್ಟರೇಟ್ ಪದವಿ ಪಡೆದವರು ಇಂದಿಗೂ ಕಡು ಜಾತಿವಾದಿಗಳಾಗಿದ್ದಾರೆ. ಶಿಕ್ಷಕರು ಅವರಿಗೆ ಸರಿಯಾದ ಪಾಠ ಮಾಡಿಲ್ಲ ಎಂದು ಅರ್ಥವಲ್ಲವೇ’ ಎಂದು ಪ್ರಶ್ನಿಸಿದರು.
‘ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಬಂದಿರುವವರು ಈ ವೇದಿಕೆಯಲ್ಲಿ ಕುಳಿತಿದ್ದಾರೆ’ ಎಂದು ಪುಟ್ಟಣ್ಣ ಅವರತ್ತ ಸಿದ್ದರಾಮಯ್ಯ ನೋಡಿದರು. ‘ವಿದ್ಯಾವಂತರಾದ, ಮಕ್ಕಳಿಗೆ ಸಂವಿಧಾನದ ಪ್ರಸ್ತಾವನೆ ಓದಿಸುವ ಶಿಕ್ಷಕರ ಕ್ಷೇತ್ರದಲ್ಲೇ ಅಭ್ಯರ್ಥಿಯ ಜಾತಿಯನ್ನು ನೋಡಿ ಮತಹಾಕುವ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಕ್ಕಳು ಶಿಕ್ಷಕರನ್ನು ನೋಡಿ ಕಲಿಯುತ್ತಾರೆ. ಹೀಗಾಗಿ ನೀವು ಒಳ್ಳೆಯ ನಡೆ, ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ನಿಮ್ಮನ್ನು ನೋಡಿ, ನಿಮ್ಮ ಪಾಠ ಕೇಳಿ ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯವನ್ನು ರೂಢಿಸಿಕೊಂಡರಷ್ಟೇ ನಿಮ್ಮ ಬದುಕು ಸಾರ್ಥಕವಾಗುತ್ತದೆ. ನನ್ನ ಈ ಮಾತಿಗೆ ಯಾವ ಶಿಕ್ಷಕರೂ ಬೇಸರ ಮಾಡಿಕೊಳ್ಳಬೇಡಿ. ಸಂವಿಧಾನದ ಪ್ರಸ್ತಾವನೆಯನ್ನು ನೀವು ಅಳವಡಿಸಿಕೊಂಡರೆ, ವಿದ್ಯಾರ್ಥಿಗಳೂ ಅನುಕರಿಸುತ್ತಾರೆ. ಮೂಢನಂಬಿಕೆ, ಮೌಢ್ಯಗಳನ್ನು ಕಿತ್ತೊಗೆಯಿರಿ’ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್ ಬಿಡಬೇಕೆಂದರೆ ಶಿಕ್ಷಕರೂ ಬಿಡಬೇಕು. ‘ಮೊಬೈಲ್ ಬಿಡಿ–ಪುಸ್ತಕ ಹಿಡಿ’ ಅಭಿಯಾನವನ್ನು ಶಿಕ್ಷಕರು ಜಾರಿಮಾಡಬೇಕು.– ಸಿದ್ದರಾಮಯ್ಯ, ಮುಖ್ಯಮಂತ್ರಿ
‘ದೇವರು ಹಣೆಬರಹ ಬರೆಯುತ್ತಾನೆಯೇ?’
‘ಶಿಕ್ಷಣ ಪಡೆಯದವರು ನಮ್ಮ ಹಣೆಬರಹ ಎನ್ನುತ್ತಾರೆ. ನಮ್ಮ ಅಪ್ಪ–ಅಮ್ಮನಿಗೆ ನಾವು ಆರು ಜನ ಮಕ್ಕಳು. ಅವರಲ್ಲಿ ಶಿಕ್ಷಣ ಪಡೆದವನು ನಾನೊಬ್ಬನೇ. ಶಿಕ್ಷಣ ನನ್ನ ಹಣೆಬರಹದಲ್ಲಿ ಬರೆದಿತ್ತೇ? ಇಲ್ಲ. ನಾನು ಶಾಲೆಗೆ ಹೋಗಿದ್ದರಿಂದ ಶಿಕ್ಷಣ ಪಡೆದೆ’ ಎಂದು ಸಿದ್ದರಾಮಯ್ಯ ಹೇಳಿದರು.
‘ನೀವು ಶಾಲೆಗೆ ಹೋಗಬೇಡಿ ವಿದ್ಯೆ ಪಡೆಯಬೇಡಿ ಎಂದು ನನ್ನ ಒಡಹುಟ್ಟಿದವರ ಹಣೆಯ ಮೇಲೆ ದೇವರು ಬರೆದಿದ್ದಾನೆಯೇ? ಒಬ್ಬರಿಗೆ ವಿದ್ಯೆ ಮತ್ತೊಬ್ಬರಿಗೆ ವಿದ್ಯೆ ಇಲ್ಲ ಎಂದು ಬರೆಯುವುದಾದರೆ ಅವನನ್ನು ದೇವರು ಎಂದು ಕರೆಯಬೇಕೇ’ ಎಂದು ಪ್ರಶ್ನಿಸಿದರು.
‘ವಿದ್ಯೆ ಯಾರಪ್ಪನ ಮನೆಯ ಆಸ್ತಿಯಲ್ಲ. ಎಲ್ಲರಿಗೂ ಸಾಮರ್ಥ್ಯವಿರುತ್ತದೆ ಅವಕಾಶ ಸಿಗಬೇಕಷ್ಟೆ. ಅಂತಹ ಅವಕಾಶವನ್ನು ಸಂವಿಧಾನ ಕೊಟ್ಟಿದೆ. ಅದನ್ನು ಸಾಕಾರಗೊಳಿಸುವ ಹೊಣೆಗಾರಿಕೆ ಶಿಕ್ಷಕರದ್ದು’ ಎಂದರು.
ಶಿಕ್ಷಕರ ನೇಮಕಕ್ಕೆ ಕ್ರಮ: ಮಧು ಬಂಗಾರಪ್ಪ
‘ಒಳಮೀಸಲಾತಿ ಹಂಚಿಕೆ ನಿರ್ಧಾರವಾಗಿದೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ತೆಗೆದುಕೊಳ್ಳುತ್ತೇವೆ. ಮುಖ್ಯಮಂತ್ರಿ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
‘ಎಲ್ಲ ಮಕ್ಕಳೂ ಸರ್ಕಾರಿ ಶಾಲೆಗೆ ಬರುವಂತಾಗಬೇಕು. ಅದಕ್ಕೆ ಬೇಕಿರುವ ಸವಲತ್ತುಗಳನ್ನು ಒದಗಿಸಿಕೊಡುತ್ತಿದ್ದೇವೆ. 800 ಕೆಪಿಎಸ್ ಶಾಲೆಗಳ ಆರಂಭಕ್ಕೆ ಸಂಪುಟ ಅನುಮೋದನೆ ನೀಡಿದೆ’ ಎಂದರು.
ಉಚಿತ ನೋಟ್ ಪುಸ್ತಕ: ‘ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ನೀಡಬೇಕು ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ್ದೇನೆ. ಮುಂದಿನ ವರ್ಷದಿಂದಲೇ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.