ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ವೇಳೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರತಿನಿಧಿಗಳು
(ಸಾಂದರ್ಭಿಕ ಚಿತ್ರ)
ಬೆಂಗಳೂರು: ತಂತ್ರಜ್ಞಾನ ಶೃಂಗಸಭೆ–25ರಲ್ಲಿ 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕರೂಪ್ ಕೌರ್ ಹೇಳಿದರು.
ಪಾಲುದಾರ ದೇಶಗಳು ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಅಭಿಯಾನದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, 2024ರ ತಂತ್ರಜ್ಞಾನ ಶೃಂಗಸಭೆಯಲ್ಲಿ 45 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಬಾರಿ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲು ಆಹ್ವಾನ ನೀಡಲಾಗಿದೆ. ಬೆಂಗಳೂರು ಹೊರವಲಯದಲ್ಲಿ ಉದಯೋನ್ಮುಖ ತಂತ್ರಜ್ಞಾನ ಸಮುಚ್ಚಯಗಳ ಸ್ಥಾಪನೆಗೆ ಪ್ರೋತ್ಸಾಹ ಮೂಲಸೌಕರ್ಯ ಅಭಿವೃದ್ಧಿ, ಪ್ರತಿಭೆಯ ಲಭ್ಯತೆ ಮತ್ತು ಉತ್ತಮ ಮಾರುಕಟ್ಟೆಗೆ ಉತ್ತೇಜನ ನೀಡುವ ಜತೆಗೆ, ಕ್ರಿಯಾತ್ಮಕ ಪರಿಸರ ವ್ಯವಸ್ಥೆ ರೂಪಿಸಲಾಗುವುದು ಎಂದರು.
ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಜತೆ ಕರ್ನಾಟಕ ಸಹಯೋಗವನ್ನು ಹೆಚ್ಚಿಸಲಾಗಿದೆ. ಪಾಲುದಾರಿಕೆಯು ಯುಎಸ್‌ಐಬಿಸಿ ಸದಸ್ಯ ಕಂಪನಿಗಳು ಹಾಗೂ ಸರ್ಕಾರದ ನಡುವಿನ ಸಂವಹನ ಮಾರ್ಗಗಳು ರಾಜ್ಯದ ಉದ್ಯಮಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತಿವೆ. ಕರ್ನಾಟಕ ಏಷ್ಯಾದ ತಂತ್ರಜ್ಞಾನದ ಹಬ್ ಆಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು.
ವಿಶ್ವದರ್ಜೆ ಮೂಲಸೌಕರ್ಯ, ವಿಸ್ತಾರವಾದ ಪ್ರದರ್ಶನ ಸಭಾಂಗಣಗಳು ಮತ್ತು ಅತ್ಯಾಧುನಿಕ ಸಮ್ಮೇಳನ ಸೌಲಭ್ಯಗಳನ್ನು ಈ ಬಾರಿಯ ತಂತ್ರಜ್ಞಾನ ಶೃಂಗಸಭೆ ಒಳಗೊಂಡಿರುತ್ತದೆ. 20 ಸಾವಿರ ನವೋದ್ಯಮ ಕಂಪನಿಗಳ ಸಂಸ್ಥಾಪಕರು, ಒಂದು ಸಾವಿರ ಹೂಡಿಕೆದಾರರು, ವಿವಿಧ ಕಂಪನಿಗಳ 15 ಸಾವಿರ ಪ್ರತಿನಿಧಿಗಳು, ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್, ಉಪ ಕಾರ್ಯದರ್ಶಿ ದಲ್ಜೀತ್ ಕುಮಾರ್ ಹಾಗೂ 20ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.