ADVERTISEMENT

ವನ್ಯಜೀವಿ ಸಂಘರ್ಷ ತಡೆಗೆ ತಂತ್ರಜ್ಞಾನದ ಮೊರೆ: ಈಶ್ವರ ಖಂಡ್ರೆ

ಎಐ ಕ್ಯಾಮೆರಾ, ಜಿಪಿಎಸ್‌ ಸಂಪರ್ಕ ಆಧಾರಿತ ಅತ್ಯಾಧುನಿಕ ನಿಯಂತ್ರಣ ಕೇಂದ್ರಗಳ ಆರಂಭ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 14:42 IST
Last Updated 3 ಜನವರಿ 2026, 14:42 IST
   

ಬೆಂಗಳೂರು: ಮಾನವ–ವನ್ಯಜೀವಿ ಸಂಘರ್ಷ ತಡೆಗಾಗಿ ಅರಣ್ಯ ಇಲಾಖೆಯು ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ ಏಳು ವಿಭಾಗೀಯ ಕೇಂದ್ರಗಳನ್ನು ಆರಂಭಿಸಿದೆ.

ಅರಣ್ಯ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದ ವೇಳೆ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಈ ಕೇಂದ್ರಗಳಿಗೆ ಚಾಲನೆ ನೀಡಿದರು.

‘ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಿಂತ, ಅಂತಹ ಸ್ಥಿತಿ ತಲೆದೋರುವುದನ್ನು ತಡೆಯುವುದೇ ಹೆಚ್ಚು ಪರಿಣಾಮಕಾರಿ. ತಡೆ ಮತ್ತು ನಿಯಂತ್ರಣ ಕ್ರಮಗಳನ್ನು ಗಮನದಲ್ಲಿ ಇರಿಸಿಕೊಂಡೇ ಈ ಕೇಂದ್ರಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ಕ್ಯಾಮೆರಾ, ಜಿಪಿಎಸ್‌ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದರು.

ADVERTISEMENT

‘ಅರಣ್ಯ ಪ್ರದೇಶದ ಹೊರಗೆ ಕಾಡುಪ್ರಾಣಿಗಳು ಓಡಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ, ಅವರು ಅರಣ್ಯ ಇಲಾಖೆ ಸಹಾಯವಾಣಿ 1926ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಆ ಕರೆಯ ಮಾಹಿತಿಯು ರಾಜ್ಯಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರಕ್ಕೆ ಹೋಗಲಿದೆ. ಅಲ್ಲಿಂದ ಸಂಬಂಧಿತ ವಿಭಾಗೀಯ ಅಥವಾ ವಲಯ ಮಟ್ಟದ ನಿಯಂತ್ರಣ ಕೊಠಡಿಗೆ ನಿರ್ದೇಶನ ರವಾನೆಯಾಗಲಿದೆ’ ಎಂದು ವಿವರಿಸಿದರು.

‘ಆನಂತರ, ವನ್ಯಜೀವಿಗಳನ್ನು ಅರಣ್ಯ ಪ್ರದೇಶಕ್ಕೆ ಮರಳಿ ಕಳುಹಿಸುವ, ಮಾನವ–ವನ್ಯಜೀವಿ ಸಂಘರ್ಷ ಉಂಟಾಗುವುದನ್ನು ತಡೆಯುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಸಮಸ್ಯೆ ಬಗೆಹರಿಯುವವರೆಗೂ ರಾಜ್ಯಮಟ್ಟದ ಕೇಂದ್ರದ ಅಧಿಕಾರಿಗಳು, ನಿಗಾ ಇರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

11 ವಿಭಾಗೀಯ ಕೇಂದ್ರಗಳು: ರಾಜ್ಯದಾದ್ಯಂತ ಈಚೆಗಷ್ಟೇ ವಿಭಾಗೀಯ ಮಟ್ಟದ ನಾಲ್ಕು ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಈಗ ಇನ್ನೂ ಏಳು ವಿಭಾಗೀಯ ಮಟ್ಟದ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಅವುಗಳ ಸಂಖ್ಯೆ 11ರಷ್ಟಾಗಿದೆ. ಈ ಹನ್ನೊಂದೂ ಕೇಂದ್ರಗಳು ಬೆಂಗಳೂರಿನ ಅರಣ್ಯ ಭವನದಲ್ಲಿರುವ ರಾಜ್ಯಮಟ್ಟದ ಕೇಂದ್ರದ ನಿರ್ದೇಶನದೊಂದಿಗೆ ಕಾರ್ಯನಿರ್ವಹಿಸಲಿವೆ. 1926 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿದರೆ, ಸಂಬಂಧಪಟ್ಟ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ.

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು, ಮಾನವ–ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದು ಈ ಉಪಕ್ರಮದ ಉದ್ದೇಶ
ಈಶ್ವರ ಬಿ.ಖಂಡ್ರೆ, ಅರಣ್ಯ ಸಚಿವ

1926ಗೆ ಕರೆ ಮಾಡಿದರೆ ಸಾಕು...

l ಅರಣ್ಯ ಪ್ರದೇಶದ ಹೊರಗೆ ಎಲ್ಲೇ ವನ್ಯಜೀವಿಗಳು ಕಂಡರೆ, ಸಾರ್ವಜನಿಕರು 1926 ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಸ್ವಯಂಚಾಲಿತವಾಗಿ ಕೇಂದ್ರ ಮತ್ತು ಸಂಬಂಧಿತ ವಲಯ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ಹೋಗಲಿದೆ

l ಎಐ ಕ್ಯಾಮೆರಾ ಮತ್ತು ಏರಿಯಲ್‌ ಚಿತ್ರಗಳ ಆಧಾರದಲ್ಲಿ ವನ್ಯಜೀವಿಗಳ ಮೇಲೆ ಈ ಕೇಂದ್ರಗಳು ನಿಗಾ ಇರಿಸಲಿವೆ. ಸಿಬ್ಬಂದಿಯ ಕಾರ್ಯಾಚರಣೆ ವೇಳೆಯೂ ಈ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತದೆ

l ರೇಡಿಯೊ ಕಾಲರ್ ಅಳವಡಿಸಿದ ಆನೆಗಳ ಮೇಲೆ ನಿಗಾ ಇರಿಸಲಿವೆ. ಅವುಗಳ ಚಲನವಲನ ಕುರಿತಾಗಿ ಸಂಬಂಧಿತ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದೆ

l ಮಾನವ–ವನ್ಯಜೀವಿ ಸಂಘರ್ಷದ ಸಾಧ್ಯತೆ ಇರುವ ಪ್ರದೇಶಗಳ ಮೇಲೆ ಸದಾ ನಿಗಾ ಇರಿಸಲಾಗಿರುತ್ತದೆ. ಅಗತ್ಯ ಎದುರಾದಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡವನ್ನು ರಚಿಸಲಾಗುತ್ತದೆ

l ಜಿಪಿಎಸ್‌ ಆಧಾರಿತ ಗಸ್ತು ಪಡೆಗಳ ಸಂಪರ್ಕದಲ್ಲಿದ್ದು,
ಸಾರ್ವಜನಿಕರಿಂದ ದೂರು ಬಂದೊಡನೆ ಗಸ್ತು ಪಡೆಗಳಿಗೆ ನಿರ್ದೇಶನ ಹೋಗಲಿದೆ. ಗಸ್ತು ಪಡೆಗಳಿಗೆ ಎಐ ಕ್ಯಾಮೆರಾ ಆಧಾರಿತ ಚಿತ್ರ ಮತ್ತು ಮಾಹಿತಿಗಳನ್ನು ಒದಗಿಸಲಾಗುತ್ತದೆ

l ಸೌರ ಬೇಲಿ, ರೈಲು ಕಂಬಿ ಬೇಲಿ, ಆನೆ ತಡೆ ಕಂದಕಗಳ ಮೇಲೆ ಈ ಕೇಂದ್ರಗಳು ನಿಗಾ ಇರಿಸಿರಲಿವೆ. ಇವುಗಳ ಬಳಿ ವನ್ಯಜೀವಿಗಳು ಸುಳಿದಾಗ ಸಂಬಂಧಿತ ವಲಯ ಅರಣ್ಯಾಧಿಕಾರಿ ಮತ್ತು ತಂಡಕ್ಕೆ ಮಾಹಿತಿ ರವಾನೆಯಾಗಲಿದೆ

l ಮೇಲಿನ ಎಲ್ಲ ಸಂದರ್ಭದಲ್ಲೂ ಸಂಬಂಧಿತ ಪ್ರದೇಶದ ಸಾರ್ವಜನಿಕರಿಗೆ ಮಾಹಿತಿ ಮತ್ತು ಮುನ್ನೆಚ್ಚರಿಕೆ ಸೂಚನೆಗಳು ರವಾನೆಯಾಗಲಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.