ADVERTISEMENT

ಶಾಲೆ ತಲುಪಿದ ಪರಿಷ್ಕೃತ ಪಠ್ಯಪುಸ್ತಕ: ಮರು ಪರಿಷ್ಕರಣೆ ಭರವಸೆ ನೀಡಿದ್ದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 19:40 IST
Last Updated 11 ಜೂನ್ 2022, 19:40 IST
ಪರಿಷ್ಕೃತ ಪಠ್ಯಪುಸ್ತಕ
ಪರಿಷ್ಕೃತ ಪಠ್ಯಪುಸ್ತಕ   

ಬೆಂಗಳೂರು: ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕಗಳಲ್ಲಿರುವ ಆಕ್ಷೇಪಾರ್ಹ ಅಂಶಗಳು, ಗೊಂದಲಗಳಿಗೆ ಕಾರಣವಾದ ಪಠ್ಯ ಭಾಗವನ್ನು ಪರಿಶೀಲಿಸಿ ಮರು ಪರಿಷ್ಕರಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು. ಏತನ್ಮಧ್ಯೆಯೇ ಶಾಲೆಗಳಿಗೆ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಪೂರೈಕೆ ಮಾಡಲಾಗುತ್ತಿದೆ.

ಪರಿಷ್ಕರಿಸಿದ ಪಠ್ಯಪುಸ್ತಕಗಳಲ್ಲಿ ನಾಡು ಕಂಡ ದಾರ್ಶನಿಕರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು. ವಿವಿಧ ಸಮುದಾಯಗಳ ಮಠಾಧೀಶರು, ಸಾಹಿತ್ಯ–ಶೈಕ್ಷಣಿಕ ವಲಯದ ಪ್ರಮುಖರು ಪರಿಷ್ಕೃತ ಪಠ್ಯಪುಸ್ತಕ ಸರಿಯಿಲ್ಲ; ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು, ಆಕ್ಷೇಪಾರ್ಹ ಅಂಶಗಳಿದ್ದರೆ ಮತ್ತೆ ಪರಿಶೀಲನೆಗೆ ಒಳಪಡಿಸಿ ಯಾರಿಗೂ ನೋವಾಗದಂತೆ ಪರಿಷ್ಕರಿಸಲಾಗುವುದು ಎಂದಿದ್ದರು. ವಿವಾದಾಸ್ಪದವಾಗಿದ್ದ, 10 ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಪೂರೈಸಲಾಗುತ್ತಿದೆ.

ADVERTISEMENT

‘ಪರಿಷ್ಕೃತ ಪಠ್ಯಪುಸ್ತಕ ಶೇ 80ಕ್ಕೂ ಹೆಚ್ಚು ಮುದ್ರಣವಾಗಿದೆ. ಮುದ್ರಣವಾಗುತ್ತಿದ್ದಂತೆ ಶಾಲೆಗಳಿಗೆ ವಿತರಣೆ ಕಾರ್ಯವೂ ನಡೆಯುತ್ತಿದೆ. ಪರಿಷ್ಕೃತ ಪಠ್ಯಪುಸ್ತಕಗಳ ಮುದ್ರಣ ಕಾರ್ಯಸ್ಥಗಿತಗೊಳಿಸಿಲ್ಲ’ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ಮೂಲಗಳು ತಿಳಿಸಿವೆ.

‘ಮತ್ತೆ ಪಠ್ಯಪುಸ್ತಕಗಳ ಪರಿಷ್ಕರಣೆ ಕೈಗೊಳ್ಳಲು ಹೊಸ ಸಮಿತಿ ರಚಿಸುವ ಉದ್ದೇಶ ಇಲ್ಲ.‌ ಸಾರ್ವಜನಿಕರು ಮತ್ತು ವಿವಿಧ ಸಂಘ–ಸಂಸ್ಥೆಗಳು ಸಲ್ಲಿಸುವ ಆಕ್ಷೇಪಗಳನ್ನು ವಿಷಯ ತಜ್ಞರು ಮತ್ತು ಶಿಕ್ಷಕರು ಪರಿಶೀಲಿಸಲಿದ್ದಾರೆ. ಈ ಉದ್ದೇಶಕ್ಕಾಗಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಕರ್ನಾಟಕ ಪಠ್ಯಪುಸ್ತಕ ಸೊಸೈಟಿನೇಮಿಸಿದೆ. ಮರುಪರಿಷ್ಕರಣೆ ಪ್ರಕ್ರಿಯೆಯ ಉಸ್ತುವಾರಿಯನ್ನು ಈ ಅಧಿಕಾರಿಗಳು ಕೈಗೊಳ್ಳಲಿದ್ದಾರೆ. ಆ ಬಳಿಕ, ಒಪ್ಪಿತವಾದ ಭಾಗವನ್ನು ಮಕ್ಕಳಿಗೆ ಕಲಿಸುವಂತೆ ಪ್ರತ್ಯೇಕ ಸುತ್ತೋಲೆ ಸೂಚಿಸುವ ಬಗ್ಗೆಯೂ ಚರ್ಚೆ ನಡೆದಿದೆ.’ ಎಂದು ಹೆಸರು ಹೇಳಲು ಬಯಸದ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ಮೂರೂ ಸಮಿತಿಗಳು (ರೋಹಿತ್‌ ಚಕ್ರತೀರ್ಥ, ಮುಡಂಬಡಿತ್ತಾಯ ಮತ್ತು ಬರಗೂರು ರಾಮಚಂದ್ರಪ್ಪ ಸಮಿತಿ) ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ಸಾರ್ವಜನಿಕ ಅಭಿಪ್ರಾಯ ಆಧರಿಸಿ ಮರುಪರಿಷ್ಕರಿಸಲಾಗುವುದು. ಇದಕ್ಕಾಗಿ ಮೂರೂ ಸಮಿತಿಗಳು ಪರಿಷ್ಕರಿಸಿದ್ದ ಪಠ್ಯಗಳ ಕರಡನ್ನು ಎಲ್ಲರಿಗೂ ಲಭ್ಯವಾಗುವಂತೆ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ಬಿ.ಸಿ.ನಾಗೇಶ್‌ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.