ವಿಜಯೇಂದ್ರ
ಮೈಸೂರು: ‘ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಎಳ್ಳಷ್ಟೂ ಅಸಮಾಧಾನವಿಲ್ಲ. ನಮ್ಮ ಬಂಧ ಗಟ್ಟಿಯಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಇಲ್ಲಿಂದ ಆರಂಭವಾದ ‘ಜನಾಕ್ರೋಶ ಯಾತ್ರೆ’ಯಲ್ಲಿ ಜೆಡಿಎಸ್ ಪಾಲ್ಗೊಳ್ಳುವಿಕೆ ಕಾಣಿಸದ ಬಗ್ಗೆ ಇಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಸದನ ಒಳಗೆ ಒಟ್ಟಾಗಿ ಹೋರಾಟ ಮಾಡಿದ್ದೇವೆ. ಪಕ್ಷಗಳ ದೃಷ್ಟಿಯಿಂದ ನಾವು ನಮ್ಮ ಹೋರಾಟ ನಡೆಸುತ್ತಿದ್ದೇವೆ. ಜೆಡಿಎಸ್ ಕೂಡ ಅದರ ಹಂತದಲ್ಲಿ ಹೋರಾಡುತ್ತಿದೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಇದೇ ಕಾರಣಕ್ಕೆ, ಮೈತ್ರಿಯಲ್ಲಿ ಅಸಮಾಧಾನವಿದೆ ಎನ್ನುವುದು ಸರಿಯಲ್ಲ’ ಎಂದರು.
‘ಜನರಿಗೆ ಬರೆ ಹಾಕುವ ದರಿದ್ರ ಸರ್ಕಾರ ರಾಜ್ಯದಲ್ಲಿದೆ. ಇದರ ವಿರುದ್ಧ ವಿರುದ್ಧ ನಮ್ಮ ಹೋರಾಟ ನಡೆಸುತ್ತಿದ್ದೇವೆ. ಮೈಸೂರಿನಿಂದ ಯಾತ್ರೆ ಆರಂಭವಾದರೆ ಪಕ್ಷಕ್ಕೆ ದೊಡ್ಡ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ಇಲ್ಲಿಂದ ಶುರು ಮಾಡಿದ್ದೇವೆ. ಸಿದ್ದರಾಮಯ್ಯ ತವರೆಂಬ ಕಾರಣಕ್ಕೆ ಇಲ್ಲಿಂದ ಆರಂಭಿಸಿಲ್ಲ. ನಾಡದೇವತೆ ಚಾಮುಂಡಿಯ ಆಶೀರ್ವಾದಕ್ಕಾಗಿ ಇಲ್ಲಿಂದ ಚಾಲನೆ ಕೊಟ್ಟಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
‘ಜನರಿಗೆ ಆಕ್ರೋಶವಿಲ್ಲ, ಬಿಜೆಪಿಗೆ ಮಾತ್ರ ಆಕ್ರೋಶವಿದೆ’ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, ‘ಕಾಂಗ್ರೆಸ್‌ನವರು ಭ್ರಮೆಯಲ್ಲಿದ್ದಾರೆ. ಹವಾನಿಯಂತ್ರಿತ ಕೊಠಡಿ(ಎಸಿ)ಯಲ್ಲಿ ಕುಳಿತವರಿಗೆ ಜನರ ಕಷ್ಟಗಳು ಕಾಣುವುದಿಲ್ಲ. ಎಲ್ಲ ಸಚಿವರೂ ಎಸಿ ರೂಂನಲ್ಲಿ ಕುಳಿತು ಆಡಳಿತ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಜನರ ಬವಣೆಗಳ ಅರಿವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.