ಜಿ. ಪರಮೇಶ್ವರ, ಗೃಹ ಸಚಿವ
ಬೆಂಗಳೂರು: ‘ಗ್ಯಾರಂಟಿ ಯೋಜನೆಗಳಿಂದ ಹೊರೆ ಆಗುತ್ತಿರುವುದು ನಿಜ. ಅದು ಗೊತ್ತಿದ್ದೇ ನಾವು ಜಾರಿಗೆ ತಂದಿದ್ದೇವೆ. ಬಡವರಿಗಾಗಿ ಆಗುವ ಈ ಹೊರೆಯನ್ನು ನಾವು ಸಹಿಸಿಕೊಳ್ಳಬೇಕು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) ಮಾತ್ರ ಗ್ಯಾರಂಟಿ ಯೋಜನೆಗಳನ್ನು ಒದಗಿಸಬೇಕು ಎಂದು ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಸಲಹೆ ನೀಡಿದ್ದಾರೆ. ವಿರೋಧ ಪಕ್ಷಗಳು ಸಲಹೆಗಳನ್ನು ನೀಡಿದರೆ ಸರ್ಕಾರ ಚರ್ಚೆಗೆ ಮುಕ್ತವಾಗಿದೆ’ ಎಂದು ಸ್ಪಷ್ಟಪಡಿಸಿದರು.
‘ಗ್ಯಾರಂಟಿ ಯೋಜನೆಗಳು ಯಶಸ್ವಿ ಆಗುವುದು ಬಿಜೆಪಿಯವರಿಗೆ ಬೇಕಿಲ್ಲ. ಹೇಗಾದರೂ ಮಾಡಿ ಈ ಯೋಜನೆಗಳನ್ನು ಹತ್ತಿಕ್ಕಲು ಅವರು ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದರು.
ಒಪ್ಪಿಕೊಳ್ಳುವುದು ಖಚಿತ: ‘ಜಾತಿ ಜನಗಣತಿ ವರದಿಯನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಒಪ್ಪಿಕೊಳ್ಳಲಿದೆ. ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ’ ಎಂದು ಪರಮೇಶ್ವರ ಹೇಳಿದರು.
‘ಜಾತಿ ಜನಗಣತಿಯು ವೈಜ್ಞಾನಿಕವಾಗಿ ನಡೆದಿದೆ. ಈ ವರದಿಯನ್ನು ಸಮಯ ನೋಡಿಕೊಂಡು ಮುಖ್ಯಮಂತ್ರಿ ಬಿಡುಗಡೆ ಮಾಡಲಿದ್ದಾರೆ’ ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.