ADVERTISEMENT

ರಾಜ್ಯದ ತೆರಿಗೆ ಪಾಲು ನೀಡದ ಕೇಂದ್ರ: ಮನು ಬಳಿಗಾರ್ ಬೇಸರ

ಕರ್ನಾಟಕ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 21:32 IST
Last Updated 18 ನವೆಂಬರ್ 2022, 21:32 IST
ಬಿ.ಎಂ. ಶ್ರೀಕಂಠಯ್ಯ ಅವರ ಪ್ರತಿಮೆಗೆ ಮನು ಬಳಿಗಾರ್, ರಾ.ನಂ. ಚಂದ್ರಶೇಖರ, ವ.ಚ. ಚನ್ನೇಗೌಡ ಹಾಗೂ ಕನ್ನಡ ಪರ ಹೋರಾಟಗಾರರು ‍ಪುಷ್ಪ ನಮನ ಸಲ್ಲಿಸಿದರು.
ಬಿ.ಎಂ. ಶ್ರೀಕಂಠಯ್ಯ ಅವರ ಪ್ರತಿಮೆಗೆ ಮನು ಬಳಿಗಾರ್, ರಾ.ನಂ. ಚಂದ್ರಶೇಖರ, ವ.ಚ. ಚನ್ನೇಗೌಡ ಹಾಗೂ ಕನ್ನಡ ಪರ ಹೋರಾಟಗಾರರು ‍ಪುಷ್ಪ ನಮನ ಸಲ್ಲಿಸಿದರು.   

ಬೆಂಗಳೂರು: ‘ಕೇಂದ್ರ ಸರ್ಕಾರವು ರಾಜ್ಯಕ್ಕೆ ತೆರಿಗೆ ಪಾಲನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದಾಗಿ ಇಲ್ಲಿ ಅಭಿವೃದ್ಧಿ ಕ್ಷೀಣಿಸುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ವಿಕಾಸ ರಂಗ ಹಾಗೂ ಕನ್ನಡ ಗೆಳೆಯರ ಬಳಗ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–8’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ‘ಕೇಂದ್ರದಲ್ಲಿ ನಮ್ಮನ್ನಾಳಿದ ಎಲ್ಲ ಪಕ್ಷಗಳ ಸರ್ಕಾರಗಳು ನಮ್ಮ ರಾಜ್ಯದಿಂದ ಪಡೆದ ತೆರಿಗೆ ಹಣವನ್ನು ಸರಿಯಾಗಿ ನೀಡಿಲ್ಲ. ಆದ್ದರಿಂದಕನ್ನಡಿಗರು ಈ ಬಗ್ಗೆ ಗಟ್ಟಿ ಧ್ವನಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕು. ಎಲ್ಲ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಬೇಕು’ ಎಂದರು.

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ‘ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡಲು ಪರಿಷ್ಕೃತ ಡಾ. ಸರೋಜಿನಿ ಮಹಿಷಿ ವರದಿಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ‘ಕರ್ನಾಟಕ ಏಕೀಕರಣದ ನಂತರವೂ ಕನ್ನಡಿಗರ ಆಶೋತ್ತರಗಳು ಈಡೇರದ ಕಾರಣ, 1962ರಲ್ಲಿ ಅ.ನ. ಕೃಷ್ಣರಾಯ‌ ಮತ್ತು ಮ. ರಾಮಮೂರ್ತಿ ಅವರು ಕರ್ನಾಟಕ ಸಂಯುಕ್ತ ರಂಗವನ್ನು ಸ್ಥಾಪಿಸಿ, ಹೋರಾಟ ಆರಂಭಿಸಿದರು. ಅದು ಇಂದಿಗೂ ಮುಂದುವರಿಯುತ್ತಿದೆ. ಗಡಿವಿವಾದ, ಜಲವಿವಾದ, ಗೋಕಾಕ್ ವರದಿ ಜಾರಿ, ಮಹಿಷಿ ವರದಿ ಜಾರಿ ಹಾಗೂ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಕನ್ನಡ ಚಳವಳಿಗಾರರು ನಿರಂತರ ಹೋರಾಟ ಮಾಡಿ, ನಾಡು- ನುಡಿಯನ್ನು ರಕ್ಷಿಸಿದ್ದಾರೆ’ ಎಂದರು.

ಕನ್ನಡ ಪರಿಚಾರಕರಿಗೆ ಸನ್ಮಾನ: ನಾಡು–ನುಡಿಯ ಹಿತಕ್ಕಾಗಿ ಶ್ರಮಿಸಿದ ಕೆ.ಎಂ. ರೇವಣ್ಣ, ಗೋವಿಂದಹಳ್ಳಿ ಕೃಷ್ಣೇಗೌಡ, ಕೃಷ್ಣಮೂರ್ತಿ, ವಿ. ಶ್ರೀನಿವಾಸ್, ಕೆ. ಕೃಷ್ಣಪ್ಪ, ರುದ್ರೇಶ್ ಜೆ.ಎಚ್., ಎಂ.ಪುಟ್ಟಸ್ವಾಮಿ,ವೈ.ಆರ್. ವಸಂತ್‌ಕುಮಾರ್, ಮಲ್ಲೇಶಪ್ಪ ಬಿ. ಯಾವಗಲ್ ಹಾಗೂ ಹ.ನ. ವಸಂತಕುಮಾರಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.