ADVERTISEMENT

ರೈತ ಬಂಧು ಯೋಜನೆ: ತೆಲಂಗಾಣ ಸರ್ಕಾರಕ್ಕೆ ನೀಡಿದ್ದ ಅನುಮತಿ ವಾಪಸ್‌ ಪಡೆದ ಚು. ಆಯೋಗ

ಪಿಟಿಐ
Published 27 ನವೆಂಬರ್ 2023, 14:33 IST
Last Updated 27 ನವೆಂಬರ್ 2023, 14:33 IST
<div class="paragraphs"><p>ರೈತ ಬಂಧು</p></div>

ರೈತ ಬಂಧು

   

ಚಿತ್ರ:  ರೈತ ಬಂಧು ವೆಬ್‌ಸೈಟ್‌

ನವದೆಹಲಿ: ತೆಲಂಗಾಣದ ಹಣಕಾಸು ಸಚಿವ ಟಿ. ಹರೀಶ್ ರಾವ್ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಬಿಆರ್‌ಎಸ್ ನೇತೃತ್ವದ ಸರ್ಕಾರಕ್ಕೆ ‘ರೈತ ಬಂಧು ಯೋಜನೆ’ಯಡಿ ರೈತರಿಗೆ ಆರ್ಥಿಕ ನೆರವು ವಿತರಿಸಲು ನೀಡಿದ ಅನುಮತಿಯನ್ನು ಕೇಂದ್ರ ಚುನಾವಣಾ ಆಯೋಗ ಸೋಮವಾರ ಹಿಂಪಡೆದಿದೆ.

ADVERTISEMENT

ತೆಲಂಗಾಣದಲ್ಲಿ ನವೆಂಬರ್‌ 30ರಂದು ಮತದಾನ ನಡೆಯಲಿದೆ. ‘ಫಲಾನುಭವಿಗಳಿಗೆ ಹಣದ ವಿತರಣೆ ಸೋಮವಾರದಿಂದ ನಡೆಯಲಿದೆ. ರೈತರು ಬೆಳಗಿನ ಉಪಾಹಾರ ಮತ್ತು ಚಹಾ ಸೇವಿಸುವ ಮೊದಲೇ ಅವರ ಖಾತೆಗೆ ಹಣ ಜಮೆಯಾಗಲಿದೆ’ ಎಂದು ಸಚಿವ ರಾವ್‌ ಹೇಳಿದ್ದರು. ಈ ಯೋಜನೆಯಡಿ ವಿತರಿಸುತ್ತಿರುವ ಹಣದ ಬಗ್ಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾವುದೇ ಹೇಳಿಕೆ ನೀಡದಂತೆ ಬಿಆರ್‌ಎಸ್‌ ಪಕ್ಷದ ಮುಖಂಡರಿಗೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. 

ಆಯೋಗದ ನಡೆಗೆ ಬಿಆರ್‌ಎಸ್‌ ಆಶ್ಚರ್ಯ ವ್ಯಕ್ತಪಡಿಸಿದ್ದು, ‘ಹಣ ವಿತರಣೆ ನಿಲ್ಲಿಸುವುದರಿಂದ ರೈತರಿಗೆ ಭರಿಸಲಾಗದ ನಷ್ಟ ಉಂಟಾಗಬಹುದು. ಹಾಗಾಗಿ, ಅನುಮತಿಯನ್ನು ಮರು ಸ್ಥಾಪಿಸಬೇಕು’ ಎಂದು ಆಗ್ರಹಿಸಿದೆ. 

ಆಯೋಗಕ್ಕೆ ಪತ್ರ ಬರೆದಿರುವ ಪಕ್ಷದ ಸಂಸದ ಕೆ.ಕೇಶವ ರಾವ್‌, ‘ಹಣ ವಿತರಣೆಯ ಬಗ್ಗೆ ಹಣಕಾಸು ಸಚಿವರು ಯಾವುದೇ ಘೋಷಣೆ ಮಾಡಿಲ್ಲ. ಅವರು ಆಯೋಗಕ್ಕೆ ಕೃತಜ್ಞತೆಯನ್ನಷ್ಟೇ ಹೇಳಿದ್ದಾರೆ. ಇದು ಅಚಾತುರ್ಯದ ಹೇಳಿಕೆ ಹಾಗೂ ಕೃತಜ್ಞತೆಯ ಅಭಿವ್ಯಕ್ತಿಯಾಗಿದೆ’ ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ‘ರೈತ ಬಂಧು ಯೋಜನೆಯಡಿ ಫಲಾನುಭವಿಗಳಿಗೆ ಹಣಕಾಸು ನೆರವು ಸಿಗದೆ ಇರಲು ಸಚಿವರ ಹೇಳಿಕೆಯೇ ಕಾರಣ. ಇದಕ್ಕೆ ಕಾಂಗ್ರೆಸ್‌ ಅನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ತಮ್ಮ ಮೂರ್ಖತನವನ್ನು ಒಪ್ಪಿಕೊಂಡ ನಂತರ, ಈ ಘೋರ ತಪ್ಪಿಗೆ ಅವರು ತಕ್ಷಣವೇ ತೆಲಂಗಾಣದ ರೈತರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ. 

ಕಳೆದ ಐದು ವರ್ಷಗಳಿಂದ ರೈತ ಬಂಧು ಯೋಜನೆ ಜಾರಿಯಲ್ಲಿದೆ. ಇದು ಚಾಲ್ತಿಯಲ್ಲಿರುವ ಯೋಜನೆಯಾಗಿರುವ ಕಾರಣಕ್ಕೆ ರೈತರಿಗೆ ಹಿಂಗಾರು ಕಂತನ್ನು ವಿತರಿಸಲು ಆಯೋಗವು ಸರ್ಕಾರಕ್ಕೆ ನವೆಂಬರ್‌ 24ರಂದು ಅನುಮತಿ ನೀಡಿತ್ತು. ಸರ್ಕಾರವು ಈ ಬಗ್ಗೆ ಯಾವುದೇ ಸಾರ್ವಜನಿಕ ಘೋಷಣೆಗಳನ್ನು ಮಾಡಬಾರದು ಎಂದೂ ಆಯೋಗವು ಹೇಳಿತ್ತು. ರೈತರಿಗೆ ನೆರವು ವಿತರಿಸಲು ಅನುಮತಿ ನೀಡುವಂತೆ ಕೋರಿ ಸರ್ಕಾರವು ಆಯೋಗಕ್ಕೆ ನವೆಂಬರ್ 18ರಂದು ಪತ್ರ ಬರೆದಿತ್ತು. 

’ಮತದಾನಕ್ಕೆ ಕೆಲವೇ ದಿನಗಳು ಉಳಿದಿರುವಾಗ ಯೋಜನೆ ಬಗ್ಗೆ ಸಚಿವರು ಹೇಳಿಕೆ ನೀಡಿದ್ದಾರೆ. ಇದು ಮಾದರಿ ನೀತಿಸಂಹಿತೆ ಹಾಗೂ ನಿಗದಿಪಡಿಸಿದ ಷರತ್ತುಗಳ ಉಲ್ಲಂಘನೆ’ ಎಂದು ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.