ಮೈಸೂರು: ಗರ್ಭಿಣಿಯರಿಗೆ ಮೊಬೈಲ್ ಫೋನ್ ‘ಕರೆ’ಯ ಮೂಲಕ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ಆರೋಗ್ಯ ಇಲಾಖೆ ಆರಂಭಿಸಿದೆ.
ತಾಯಿ–ಮಗುವಿನ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಲ್ಲಿ ಸೇವೆಯನ್ನು ಆರಂಭಿಸಲಾಗಿದೆ.
ನಾಲ್ಕು ತಿಂಗಳು ಮೇಲ್ಪಟ್ಟ ಗರ್ಭಿಣಿ ಹಾಗೂ ಒಂದು ವರ್ಷದೊಳಗಿನ ಶಿಶುಗಳ ಆರೈಕೆಯಲ್ಲಿ ಕುಟುಂಬದವರು ವಹಿಸಬೇಕಾದ ಕಾಳಜಿ, ಲಸಿಕೆ ಕೊಡಿಸುವುದು ಹಾಗೂ ಇತರ ತಪಾಸಣೆ ಕುರಿತು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮುದ್ರಿತ ಆಡಿಯೊಗಳ ಮಾಹಿತಿ ಒದಗಿಸಲಾಗುವುದು. ಹೆಚ್ಚುವರಿ ಅಥವಾ ನಿರ್ದಿಷ್ಟ ಮಾಹಿತಿಯ ಅಗತ್ಯವಿದ್ದಲ್ಲಿ ಸಂದೇಶ ಕಳುಹಿಸಿ ಪಡೆದುಕೊಳ್ಳಬಹುದಾಗಿದೆ.
‘ತಾಯಿ ಕಾರ್ಡ್ ಪಡೆದಿರುವ ಎಲ್ಲರಿಗೂ, ಅವರು ಒದಗಿಸಿದ ಮೊಬೈಲ್ ಫೋನ್ ಸಂಖ್ಯೆಗೆ ಇಲಾಖೆಯಿಂದ ಕರೆ ಬರುತ್ತದೆ. ಒಮ್ಮೆ ಸ್ವೀಕರಿಸಿದರೆ ನಿಯಮಿತವಾಗಿ ಸಲಹಾ ಕರೆಗಳು ಬರುತ್ತಿರುತ್ತವೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಯರಿಗೂ ಇಂತಹ ಕರೆ ಬರುತ್ತವೆ. ಅವರು ಸ್ವೀಕರಿಸಿ ಕೇಳಿಸಿಕೊಂಡರೆ ಅದು ರೆಕಾರ್ಡ್ ಆಗುತ್ತದೆ. ಅದನ್ನು ಗರ್ಭಿಣಿಯರ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆ ಇದಾಗಿದೆ’ ಎಂದು ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜಾಗೃತಿ: ‘ತಾಯಿ, ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ, ಮಕ್ಕಳ ಲಸಿಕಾ ಪ್ರಮಾಣದ ಶೇ 100ರಷ್ಟು ಗುರಿ ಸಾಧಿಸಲು ಯೋಜನೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಅವರು.
ಆರೋಗ್ಯ –ಶಿಕ್ಷಣ ಸೇವೆ
ಗರ್ಭಿಣಿಯರು, ತಾಯಂದಿರು ಮತ್ತು ಅವರ ಕುಟುಂಬದವರಿಗೆ ಸಂತಾನೋತ್ಪತ್ತಿ, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯ ಸಂಬಂಧಿತ ಸಕಾಲಿಕ, ನಿಖರ ಮಾಹಿತಿಯನ್ನು ಒದಗಿಸುವ ಮೊಬೈಲ್ ಆರೋಗ್ಯ ಶಿಕ್ಷಣ ಸೇವೆ ಇದಾಗಿದೆ. ಮಗುವಿಗೆ ಒಂದು ವರ್ಷದವರೆಗೆ (72 ವಾರಗಳು) ಬಾಣಂತಿ ಮತ್ತು ಶಿಶುವಿನ ಸಾವು ಸಂಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕರೆ ಸೇವೆ ಆರಂಭಿಸಲಾಗಿದೆ. ಇದಕ್ಕೆ ‘ಕಿಲ್ಕಾರಿ’ ಎಂದು ಹೆಸರಿಡಲಾಗಿದೆ. 0124-4451600 ಮೂಲಕ ಪಾಲಕರೊಂದಿಗೆ ಮಾತನಾಡಲಾ ಗುತ್ತದೆ. ಒಂದು ವೇಳೆ ಕರೆ ಸ್ವೀಕರಿಸಲು ಅಸಾಧ್ಯ ವಾದಲ್ಲಿ, ಆರೋಗ್ಯ ಮಾಹಿತಿ ಪಡೆಯಲು 14423 ಇನ್‌ಬಾಕ್ಸ್ ನಂಬರ್‌ಗೆ ಕರೆ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.
ನೆನಪಿಸುವ ಉದ್ದೇಶ
ಧನುರ್ವಾಯು- ಗಂಟಲಮಾರಿ ಚುಚ್ಚುಮದ್ದು ನೀಡುವುದು, ರಕ್ತಹೀನತೆ ತಡೆಗೆ ಕನಿಷ್ಠ 180 ಕಬ್ಬಿಣಾಂಶ ಮಾತ್ರೆ ಸೇವಿಸುವುದು, ಪ್ರತಿ ತಿಂಗಳು ವೈದ್ಯರಿಂದ ತಪಾಸಣೆ, ರಕ್ತಪರೀಕ್ಷೆ, ಕಾಲಕಾಲಕ್ಕೆ ಮಕ್ಕಳಿಗೆ 0–9 ತಿಂಗಳವರೆಗೆ ಕೊಡಿಸಬೇಕಾದ ಲಸಿಕೆ ಕುರಿತು ಪಾಲಕರಿಗೆ ತಿಳಿಸುವ ‘ನೆನಪಿನ ಕರೆ’ಯ ಕಾರ್ಯಕ್ರಮವಿದು.
ಗರ್ಭಧಾರಣೆ ಅಥವಾ ಹೆರಿಗೆಯ ಮಾಹಿತಿಯನ್ನು ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ ಅಥವಾ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮೊಬೈಲ್ ಸಂಖ್ಯೆ ನೀಡುವ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು. ಈ ರೀತಿ ಮಾಡುವ ಮೂಲಕ ‘ಕಿಲ್ಕಾರಿ’ ಕರೆಗಳನ್ನು ಉಚಿತವಾಗಿ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.