ADVERTISEMENT

ಮತ್ತೆ ಮುನ್ನಲೆಗೆ ಬಂದ ‘ಅಧಿಕಾರ ಹಂಚಿಕೆ’ ವಿಚಾರ: ‘ಕೈ’ಯಲ್ಲಿ ಮೊಯಿಲಿ ಕಿಡಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 15:54 IST
Last Updated 3 ಮಾರ್ಚ್ 2025, 15:54 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಬೆಂಗಳೂರು: ‘ಡಿ.ಕೆ. ಶಿವಕುಮಾರ್ ಸದ್ಯದಲ್ಲೇ ಮುಖ್ಯಮಂತ್ರಿ ಆಗಬೇಕು’ ಎಂಬ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿಕೆಯು ಅಧಿಕಾರ ಹಂಚಿಕೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ಮತ್ತೆ ಮುನ್ನಲೆಗೆ ತಂದಿದೆ. ಮೊಯಿಲಿ ಹೇಳಿಕೆ ‘ಕೈ’ಯಲ್ಲಿ ಕಿಡಿ ಹೊತ್ತಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಭಾನುವಾರ ಮಾತನಾಡಿದ್ದ ಮೊಯಿಲಿ, ‘ಸಂಕಷ್ಟದಲ್ಲಿದ್ದ ಪಕ್ಷವನ್ನು  ಶಿವಕುಮಾರ್ ಮೇಲಕ್ಕೆತ್ತಿದ್ದರು. ಯಾರು ಏನೇ ಮಾಡಿದರೂ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಾಧ್ಯವಿಲ್ಲ‘ ಎಂದಿದ್ದರು.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರ ಆಪ್ತ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ‘ಮೊಯಿಲಿ ಪಕ್ಷದ ಹಿರಿಯ ನಾಯಕರು. ಅವರು ಮತ್ತು ಇನ್ನೊಬ್ಬ ಶಾಸಕ ಕೂಡಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೆಲ್ಲ ಅವರ ವೈಯಕ್ತಿಕ ಅಭಿಪ್ರಾಯ. ಯಾರೇ ಅಭಿಪ್ರಾಯ ವ್ಯಕ್ತಪಡಿಸಿದರೂ ಅಂತಿಮವಾಗಿ ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ನಿರ್ಣಯ ಆಗುತ್ತದೆ’ ಎಂದರು.

ADVERTISEMENT

‘ಮಾನದಂಡ ಎಲ್ಲರಿಗೂ ಒಂದೇ ಇರಬೇಕಲ್ಲವೇ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. 

‘ಅವರೂ (ಮೊಯಿಲಿ) ಮಾತನಾಡಿದ್ದಾರೆ. ಬೇರೆಯವರೂ ಮಾತನಾಡಿದ್ದಾರೆ. ಆದರೆ, ನಾವು ಮಾತನಾಡುವಾಗ ಏನೇನೊ ಹೇಳುತ್ತಿದ್ದರು’ ಎಂದರು. ‘ಈ ವಿಚಾರದಲ್ಲಿ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದೂ ಹೇಳಿದರು.

ಹೈಕಮಾಂಡ್ ಜೊತೆ ಮಾತನಾಡಲಿ: ‘ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಯಾರಿಗಾದರೂ ಸಮಸ್ಯೆಗಳಿದ್ದರೆ ಅವರು ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಮಾತನಾಡಲಿ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಶಿವಕುಮಾರ್ ಇವತ್ತು ಅಥವಾ ನಾಳೆ ಮುಖ್ಯಮಂತ್ರಿ ಆಗುತ್ತಾರೆಂದು ಮೊಯಿಲಿಯವರಾಗಲಿ, ಬೇರೆಯವರಾಗಲಿ ಹೇಳಿಲ್ಲ. ಮುಂದೊಂದು ದಿನ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದಿದ್ದಾರೆ. ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ. ಶಿವಕುಮಾರ್ ಉಪ ಮುಖ್ಯಮಂತ್ರಿ. ಸದ್ಯಕ್ಕೆ ಕುರ್ಚಿಗಳು ಖಾಲಿ ಇಲ್ಲ. ಮುಂದೊಂದು ದಿನ ಯಾರಾದರೂ ಮುಖ್ಯಮಂತ್ರಿ ಆಗಬೇಕೆಂದು ನಾನು ಬಯಸಬಹುದು. ಹೈಕಮಾಂಡ್ ನೀಡಿರುವ ಜವಾಬ್ದಾರಿಗಳನ್ನು ಎಲ್ಲರೂ ನಿಭಾಯಿಸಬೇಕು’ ಎಂದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್, ‘ಮೊಯಿಲಿಯವರು ಈ ರೀತಿ ಹೇಳಿಕೆ ನೀಡಿದ್ದರೆ, ಅವರನ್ನೇ ಕೇಳಬೇಕು. ಏಕೆಂದರೆ, ನಾವು ಯಾವಾಗಲೂ ಹೈಕಮಾಂಡ್ ಆದೇಶವನ್ನು ಅನುಸರಿಸುತ್ತೇವೆ. ಹೈಕಮಾಂಡ್ ಏನೇ ಹೇಳಿದರೂ ಅದು ನಮಗೆ ಅಂತಿಮ’ ಎಂದರು.

ದಾವಣಗೆರೆಯಲ್ಲಿ ಭಾನುವಾರ ಮಾತನಾಡಿದ್ದ ಚನ್ನಗಿರಿ ಕಾಂಗ್ರೆಸ್ ಶಾಸಕ  ಬಸವರಾಜ ಶಿವಗಂಗಾ, ‘ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಪಕ್ಕಾ. ನಾನು ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.