ಶಿವರಾಮ ಹೆಬ್ಬಾರ
ಶಿರಸಿ: 'ಪಕ್ಷದಲ್ಲಿ ಇಟ್ಟುಕೊಳ್ಳಬೇಕೇ, ಉಚ್ಛಾಟಿಸಬೇಕೇ ಎಂಬುದನ್ನು ನನಗೆ ನೊಟೀಸ್ ನೀಡಿದವರು ನಿರ್ಧರಿಸಬೇಕು. ನಾನು ರಾಜಕಾರಣದಲ್ಲಿ ಹೆದರುವ ಕಾಲ ಮುಗಿದು ಹೋಗಿದೆ' ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಶಿರಸಿ ನಗರದಲ್ಲಿ ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಅವರು,' ನನ್ನನ್ನೂ ಒಳಗೊಂಡು ಐದು ಮಂದಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ವತಿಯಿಂದ ನೊಟೀಸ್ ಜಾರಿ ಮಾಡಲಾಗುತ್ತು. 72 ಗಂಟೆಯಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿತ್ತು. ನಾನು ಕೂಡ ನೊಟೀಸ್ ಸ್ವೀಕರಿಸಿ 24 ಗಂಟೆಯಲ್ಲಿ ಸೂಕ್ತ ಉತ್ತರವನ್ನು ಲಿಖಿತವಾಗಿ ಕಳುಹಿಸಿದ್ದೇನೆ. ಕಾಲ ಬಂದಾಗ ಆ ಉತ್ತರ ಏನೆಂದು ಮಾಧ್ಯಮದೆದುರು ತೆರೆದಿಡುತ್ತೇನೆ' ಎಂದರು.
'ಬಸವನಗೌಡ ಯತ್ನಾಳ ನಂತರ ಉಚ್ಛಾಟನೆ ಆಗುವವರು ಎಸ್.ಟಿ.ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರ ಎಂದು ಹೇಳಿಕೆ ನೀಡಿರುವ ಛಲವಾದಿ ನಾರಾಯಣಸ್ವಾಮಿ ಅವರಿಗೆ ನನ್ನನ್ನು ಉಚ್ಛಾಟಿಸುವ ಅಧಿಕಾರವಿಲ್ಲ. ಅವರು ವಿಧಾನ ಪರಿಷತ್ ಸಭಾ ನಾಯಕರಷ್ಟೇ. ನನ್ನನ್ನು ಉಚ್ಛಾಟಿಸುವ ವೇದಿಕೆ ಬೇರೆಯಿದೆ. ಒಂದೊಮ್ಮೆ ಉಚ್ಛಾಟಿಸಿದರೆ ಆಗ ಅದರ ಬಗ್ಗೆ ಮಾತನಾಡುವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.