ADVERTISEMENT

ಮತದಾರರ ಮಾಹಿತಿ ಕಳ್ಳತನವೂ ಭಯೋತ್ಪಾದನೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 16:02 IST
Last Updated 15 ಡಿಸೆಂಬರ್ 2022, 16:02 IST
   

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಮತದಾರರ ಮಾಹಿತಿ ಕಳ್ಳತನವೂ ಭಯೋತ್ಪಾದನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಮಂಗಳೂರು ಸ್ಫೋಟವೇ ಇರಲಿ, ಮತದಾರರ ಮಾಹಿತಿ ಕಳ್ಳತನವೇ ಇರಲಿ ಎರಡರ ಸೂಕ್ತ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಡಿ.ಕೆ ಶಿವಕುಮಾರ್‌ ಅವರು ಮಂಗಳೂರು ಕುಕ್ಕರ್‌ ಸ್ಫೋಟದ ಬಗ್ಗೆ ಪ್ರಶ್ನೆ ಮಾಡಿದ್ದರು. ಮತದಾರರ ಮಾಹಿತಿ ದುರ್ಬಳಕೆಯ ಹಗರಣ ಮುಚ್ಚಿಹಾಕುಲು ಇಂಥದ್ದೊಂದು ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ. ಜನರೇನು ದಡ್ಡರೇ ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಬಿಜೆಪಿ ಮತ್ತು ನಾಯಕರು ಡಿ.ಕೆ ಶಿವಕುಮಾರ್‌ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಸರಣಿ ಟ್ವೀಟ್‌ ಮಾಡಿದ್ದು, ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ADVERTISEMENT

‘ಕರ್ನಾಟಕದಲ್ಲಿ ಮತದಾರರ ಮಾಹಿತಿ ದುರ್ಬಳಕೆ ಮಾಡಿರುವುದು ರಾಷ್ಟ್ರೀಯ ಭದ್ರತೆಯ ಸಮಸ್ಯೆ. ಮತದಾರರ ಮಾಹಿತಿಯನ್ನು ಕಳ್ಳತನ ಮಾಡಲು ಹೇಗೆ ಸಾಧ್ಯ? ಇದನ್ನು ಯಾರು ಹಾಗೂ ಯಾರ ಸೂಚನೆ ಮೇರೆಗೆ ಮಾಡಿದರು? ವಿದೇಶದಿಂದ ಸೈಬರ್‌ ದಾಳಿ ಮಾಡಲಾಯಿತೇ?’ ಎಂದು ಪ್ರಶ್ನಿಸಿದ್ದಾರೆ.

‘ಇದನ್ನು ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸಿ ಅದಕ್ಕೆ ಕಾರಣರಾದವರನ್ನು ‘ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯಿದೆ–2008 ಬಂಧಿಸಬೇಕು. ಮಂಗಳೂರು ಸ್ಪೋಟವೇ ಆಗಲಿ ಅಥವಾ ಮತದಾರರ ಮಾಹಿತಿ ಕಳ್ಳತನವೇ ಆಗಿರಲಿ ಕಾಂಗ್ರೆಸ್‌ ಪಕ್ಷ ಕೇಳುತ್ತಿರುವುದು ಮುಕ್ತ, ನ್ಯಾಯಸಮ್ಮತ ಹಾಗೂ ಪ್ರಾಮಾಣಿಕ ತನಿಖೆ. ಎರಡನ್ನೂ ಪ್ರಾಮಾಣಿಕತೆಯಿಂದ ತನಿಖೆ ಮಾಡಬೇಕು‘ ಎಂದು ಆಗ್ರಹಿಸಿದ್ದಾರೆ.

‘ಈ ಸರ್ಕಾರ ಪ್ರಾಮಾಣಿಕತೆಯಿಂದ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಜನತೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಮತದಾರರ ಮಾಹಿತಿ ಕಳ್ಳತನ ಹಗರಣದ ಸತ್ಯಾಂಶ ಬಹಿರಂಗಗೊಂಡಂತೆ ಮಂಗಳೂರು ಸ್ಫೋಟದ ಹಿಂದಿರುವವರು ಯಾರು ಎಂಬ ಸತ್ಯವೂ ಬಯಲಾಗಬೇಕು. ಕಾಂಗ್ರೆಸ್ ಪಕ್ಷ ಸತ್ಯ, ನ್ಯಾಯದಲ್ಲಿ ನಂಬಿಕೆ ಇಟ್ಟಿದೆ. ಆದರೆ ಬಿಜೆಪಿ ಸುಳ್ಳಿನ ಕತ್ತಿ ಅಲಗಿನ ಮೇಲೆ ನಿಂತಿದೆ . ಮಂಗಳೂರು ಸ್ಫೋಟ ಮತ್ತು ಮತದಾರರ ದತ್ತಾಂಶ ದುರ್ಬಳಕೆ ಹಗರಣದ ಕುರಿತಂತೆ ಪ್ರಾಮಾಣಿಕ ತನಿಖೆಯನ್ನು ಕಾಂಗ್ರೆಸ್ ಬಯಸುತ್ತದೆ. ಬಿಜೆಪಿ ಕೇವಲ ರಾಜಕೀಯ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಮತದಾರರ ಮಾಹಿತಿ ಕಳ್ಳತನದ ಬಗ್ಗೆ ಮಾಧ್ಯಮಗಳು ಏಕೆ ಮಾತನಾಡುತ್ತಿಲ್ಲ? ಮಾಧ್ಯಮದವರು ಲಂಚ ಪಡೆದಿದ್ದಾರೆ ಎಂಬ ಕಾರಣಕ್ಕೋ? ಅಥವಾ ಮಾಧ್ಯಮದವರು ಬಿಜೆಪಿಗೆ ಹೆದರುತ್ತಿದ್ದಾರೆಯೋ?‘ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.