ಕಾರಜೋಳ
ಬೆಳಗಾವಿ: ‘ಸುಳ್ಳು ಹೇಳಿ ಮತ ಪಡೆದು ಅಧಿಕಾರಕ್ಕೇರಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಜನರಿಗೆ ಮೋಸ ಮಾಡುತ್ತಿದೆ. ರಾಜ್ಯದಲ್ಲಿ ಇಂದೇ ವಿಧಾನಸಭೆ ಚುನಾವಣೆ ನಡೆದರೆ, ಕಾಂಗ್ರೆಸ್ 20 ಸೀಟುಗಳನ್ನೂ ಗೆಲ್ಲದ ಪರಿಸ್ಥಿತಿ ಇದೆ’ ಎಂದು ಸಂಸದ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರ ಹಿಡಿದು ಎರಡು ವರ್ಷವಾಗಿದೆ. ಆರಂಭದಲ್ಲಿ ಐದು ‘ಗ್ಯಾರಂಟಿ’ಗಳನ್ನೂ ಸರಿಯಾಗಿ ಅನುಷ್ಠಾನ ಮಾಡುತ್ತೇವೆ ಎಂದಿದ್ದರು. ಆದರೆ, ಈಗ ಯಾವ ‘ಗ್ಯಾರಂಟಿ’ಗಳ ಲಾಭವೂ ಜನರಿಗೆ ಸಿಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆ ಹಣ ಮೂರು ತಿಂಗಳಿಂದ ಜಮೆಯಾಗಿಲ್ಲ’ ಎಂದು ದೂರಿದರು.
‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ನಿತ್ಯ ಕೊಲೆ, ಸುಲಿಗೆಯಂಥ ಪ್ರಕರಣ ವರದಿಯಾಗುತ್ತಿವೆ. ಬೇರೆ ರಾಜ್ಯದವರೂ ಇಲ್ಲಿಗೆ ಬಂದು ಕಳ್ಳತನ ಮಾಡುತ್ತಿದ್ದಾರೆ. ಜನರಿಗೆ ಅದರಲ್ಲೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಪುಂಡರ ಹಾವಳಿ ಮಿತಿಮೀರಿದ್ದು, ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರದ ಹಿಡಿತ ತಪ್ಪಿಹೋಗಿದೆ’ ಎಂದು ಆರೋಪಿಸಿದರು.
‘ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಗುತ್ತಿಗೆದಾರರ ₹64 ಸಾವಿರ ಕೋಟಿ ಬಿಲ್ ಬಾಕಿ ಇದೆ. ನಮ್ಮ ಅಧಿಕಾರವಧಿಯಲ್ಲಿ ಆರಂಭಗೊಂಡಿದ್ದ ನೀರಾವರಿ ಯೋಜನೆ ಸ್ಥಗಿತಗೊಂಡಿವೆ. ಇವರ ಅಧಿಕಾರವಧಿಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಾಡಿಕೊಂಡಷ್ಟು ಆತ್ಮಹತ್ಯೆಯನ್ನು, ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಯಾವ ಸರ್ಕಾರದಲ್ಲೂ ನೋಡಿಲ್ಲ’ ಎಂದು ದೂರಿದರು.
‘ನಾಡಿನ ಅಭಿವೃದ್ಧಿ ಬಗ್ಗೆ ಈ ಸರ್ಕಾರಕ್ಕೆ ಎಳ್ಳಷ್ಟು ಕಾಳಜಿ ಇಲ್ಲ. ಈ ಸರ್ಕಾರ ಮುಂದುವರಿಯುವ ಪ್ರಶ್ನೆಯೇ ಇಲ್ಲ. ಹಾಲು ಕುಡಿದು ಸಾಯುವ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಗೌರವದಿಂದ ರಾಜೀನಾಮೆ ಕೊಟ್ಟು, ಮತ್ತೊಮ್ಮೆ ವಿಧಾನಸಭೆ ಚುನಾವಣೆ ಎದುರಿಸಬೇಕು’ ಎಂದು ಒತ್ತಾಯಿಸಿದರು.
‘ಕೆಪಿಸಿಸಿ ಅಧ್ಯಕ್ಷರಿಗೆ ಕಿರೀಟ ಇದೆಯಾ ಎಂದು ಸಚಿವ ಕೆ.ರಾಜಣ್ಣ ಕೇಳುತ್ತಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ನಾಲ್ಕು ಗುಂಪುಗಳಾಗಿವೆ. ಸತ್ತ ಪ್ರಾಣಿಗಳನ್ನು ತಿನ್ನಲು ರಣಹದ್ದುಗಳು ಕಚ್ಚಾಡುವಂತೆ, ಕಾಂಗ್ರೆಸ್‌ನ ನಾಯಕರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
‘ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಎನ್ನುವ ವಿಷಯ ಹುಟ್ಟುಹಾಕಲಾಗಿದೆ. ಅಲ್ಲಿ ದಲಿತ ಮುಖ್ಯಮಂತ್ರಿ ಮಾಡಲು ಅವಕಾಶ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ದಲಿತ ಮುಖ್ಯಮಂತ್ರಿ ಮಾಡುತ್ತೇವೆ’ ಎಂದು ಘೋಷಿಸಬೇಕು. ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ ಅವರನ್ನಾದರೂ ಮಾಡಲಿ ಅಥವಾ ತಾವೇ ಸಿ.ಎಂ ಆಗಲಿ’ ಎಂದು ಅಭಿಪ್ರಾಯಪಟ್ಟರು.
‘ಬಿಜೆಪಿಯಲ್ಲಿನ ಗೊಂದಲ ಎಲ್ಲವೂ ಸರಿಯಾಗುತ್ತದೆ. ಕಾಂಗ್ರೆಸ್ ಎದುರಿಸಲು ಎಲ್ಲರೂ ಒಂದಾಗುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.