ADVERTISEMENT

ಬಲವಂತ ಭೂಸ್ವಾಧೀನಕ್ಕಿಲ್ಲ ಸರ್ಕಾರದ ಸಮ್ಮತಿ: ನಿರಾಣಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 12:53 IST
Last Updated 7 ಜುಲೈ 2022, 12:53 IST
   

ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗಾಗಿ ರೈತರಿಂದ ಬಲವಂತವಾಗಿ ಜಮೀನು ಸ್ವಾಧೀನ ಮಾಡಿಕೊಳ್ಳಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ರೈತರ ನಿಯೋಗ ಹಾಗೂ ಜನಪ್ರತಿನಿಗಳ ಸಭೆಯಲ್ಲಿ ಗುರುವಾರ ಅವರು ಮಾತನಾಡಿದರು.

ಸ್ವಯಂಪ್ರೇರಿತರಾಗಿ ಜಮೀನು ನೀಡುವ ರೈತರ ಜಮೀನುಗಳನ್ನಷ್ಟೆ ಸ್ವಾಧೀನ ಮಾಡಿಕೊಳ್ಳಬೇಕು. ಬಲವಂತವಾಗಿ ಇಲ್ಲವೇ, ಬೆದರಿಕೆ ಹಾಕಿ ಭೂಮಿ ವಶಕ್ಕೆ ಪಡೆಯಬಾರದು. ಇಂತಹ ವಿಷಯದಲ್ಲಿ ರೈತರಿಂದ ದೂರುಗಳು ಬಂದರೆ ಅದಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಸ್ವಇಚ್ಛೆಯಿಂದ ಭೂಮಿ ನೀಡುವ ರೈತರ ಸರ್ವೆ ನಂಬರ್‌ಗಳನ್ನು ಪಡೆದುಕೊಂಡು ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕು. ತಹಶೀಲ್ದಾರ್, ಉಪವಿಭಾಗಾಧಿಕಾರಿ ಸೇರಿದಂತೆ ಕೆಐಎಡಿಬಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಒಪ್ಪಿಗೆ ನೀಡದ ರೈತರ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ನಿರ್ದೇಶನ ನೀಡಿದರು.

ಕೈಗಾರಿಕೆಗಳ ಸ್ಥಾಪನೆಯಿಂದ ರಾಜ್ಯದ ಆರ್ಥಿಕಾಭಿವೃದ್ಧಿ ಸಾಧ್ಯ. ಉದ್ಯೋಗವೂ ಸೃಷ್ಟಿಯಾಗುತ್ತದೆ. ಕೈಗಾರಿಕೆಗಳ ಬೆಳವಣಿಗೆಗೆ ಭೂಸ್ವಾಧೀನ ಅನಿವಾರ್ಯ. ಅದಕ್ಕಾಗಿ ರೈತರ ಒಕ್ಕಲೆಬ್ಬಿಸುವಿಕೆಯನ್ನು ಸರ್ಕಾರ ಬಯಸುವುದಿಲ್ಲ ಎಂದು ಭರವಸೆ ನೀಡಿದರು.

ಕೈಗಾರಿಕೆಗಳ ಸ್ಥಾಪನೆಗೆ ಚನ್ನರಾಯಪಟ್ಟಣದಲ್ಲಿ 1,777 ಎಕರೆ ಜಮೀನು ಗುರುತಿಸಲಾಗಿದೆ. ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಸ್ವಾಧೀನ ಮಾಡುತ್ತೇವೆ. ಒಪ್ಪದಿದ್ದರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ.ನಾಗರಾಜ್, ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ನಿಸರ್ಗ ನಾರಾಯಣಸ್ವಾಮಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕೆಐಎಡಿಬಿ ಸಿಇಒ ಶಿವಶಂಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.