ADVERTISEMENT

ಜಗತ್ತಿನಲ್ಲಿ ಗುರುವಿಗಿಂತ ಶ್ರೇಷ್ಠ ಇನ್ನೊಬ್ಬರಿಲ್ಲ: ತೋಂಟದ ಸಿದ್ಧರಾಮ ಸ್ವಾಮೀಜಿ

ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 16:47 IST
Last Updated 18 ಜನವರಿ 2023, 16:47 IST
ಕಾರ್ಯಕ್ರಮದಲ್ಲಿ (ಎಡದಿಂದ) ವಿ. ಸೋಮಣ್ಣ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪಾಲನೇತ್ರ, ದೊಡ್ಡರಂಗೇಗೌಡ, ವಿ. ಸೋಮಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ವಿ. ಸೋಮಣ್ಣ, ಎಸ್.ಜಿ. ಸುಶೀಲಮ್ಮ ಮತ್ತು ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ವಿ. ಸೋಮಣ್ಣ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪಾಲನೇತ್ರ, ದೊಡ್ಡರಂಗೇಗೌಡ, ವಿ. ಸೋಮಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ವಿ. ಸೋಮಣ್ಣ, ಎಸ್.ಜಿ. ಸುಶೀಲಮ್ಮ ಮತ್ತು ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಿರಾಕಾರ, ನಿರ್ಗುಣ ಸ್ವರೂಪಿಯಾದ ಭಗವಂತನನ್ನು ನೋಡಲು ಯಾರಿಗೂ ಸಾಧ್ಯವಿಲ್ಲ. ಆದ್ದರಿಂದ ಈ ಜಗತ್ತಿನಲ್ಲಿ ಗುರುವಿಗಿಂತ ಶ್ರೇಷ್ಠರು ಇನ್ನೊಬ್ಬರಿಲ್ಲ’ ಎಂದು ಗದಗದ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ವಿ. ಸೋಮಣ್ಣ ಪ್ರತಿಷ್ಠಾನ ನಗರದಲ್ಲಿ ಬುಧವಾರ ಹಮ್ಮಿಕೊಂಡ ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ, ಮಾತನಾಡಿದರು. ‘ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಭಗವಂತನ ಸಾಕಾರರೂಪ ಗುರುವಾಗಿದ್ದಾನೆ. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಇದಕ್ಕೆ ಉತ್ತಮ ಉದಾಹರಣೆ. ಅವರ ಆದರ್ಶ ಬದುಕು ನಮ್ಮ ಕಣ್ಣ ಮುಂದೆ ಸದಾ ಇರಬೇಕು’ ಎಂದು ಹೇಳಿದರು.

‘ಮನುಷ್ಯ ಸ್ವಾರ್ಥಕ್ಕಾಗಿ ಬದುಕದೇ, ಪರೋಪಕಾರಿಯಾಗಬೇಕು. ಆಗ ಜೀವ ಸಾರ್ಥಕ ಆಗಲಿದೆ. ಮಾನವೀಯ ಮೌಲ್ಯವೂ ಉಳಿಯಲಿದೆ. ಪ್ರೀತಿಗಿಂತ ಮಿಗಿಲಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಪ್ರೀತಿಯಿಂದ ಎಲ್ಲರ ಹೃದಯವನ್ನೂ ಗೆಲ್ಲಲು ಸಾಧ್ಯ ಎನ್ನುವುದನ್ನು ಬಾಲಗಂಗಾಧರನಾಥ ಸ್ವಾಮೀಜಿ ತೋರಿಸಿಕೊಟ್ಟು ಹೋಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ವಸತಿ ಸಚಿವರೂ ಆಗಿರುವ ಸ್ಥಳೀಯ ಶಾಸಕ ವಿ. ಸೋಮಣ್ಣ, ‘ಬಾಲಗಂಗಾಧರನಾಥ ಸ್ವಾಮೀಜಿ ದೂರದೃಷ್ಟಿ ಹೊಂದಿದ್ದರು. 1996ರಲ್ಲಿಯೇ ವಿಜಯನಗರದಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿ ಆಯುರ್ವೇದ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಿದ್ದರು. ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇರಿ ಹಲವು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆಗೈದಿದ್ದಾರೆ. ಸಂಸ್ಕಾರ–ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ದೊಡ್ಡರಂಗೇಗೌಡ, ‘ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಬಾಲಗಂಗಾಧರನಾಥ ಸ್ವಾಮೀಜಿ, ತಮ್ಮ ಅಸಾಮಾನ್ಯ ಕಾಯಕಗಳಿಂದ ಮಹಾಪುರುಷರಾದರು. ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಆದಿಚುಂಚನಗಿರಿ ಕ್ಷೇತ್ರವನ್ನು, ಕೇವಲ ಮೂರುವರೆ ದಶಕದಲ್ಲಿ ಮಹಾಕ್ಷೇತ್ರವನ್ನಾಗಿಸಿದ್ದು ವಿಶೇಷ. ಜ್ಞಾನ ಪ್ರಸಾರದಿಂದ ಸಮಾಜದ ಉನ್ನತಿ ಎಂದು ನಂಬಿ ಮುಂದುವರಿದ ಅವರು, ಈ ಕಾರ್ಯಕ್ಕಾಗಿ ಶಿಕ್ಷಣ ಕ್ಷೇತ್ರವನ್ನು ಆರಿಸಕೊಂಡು, ದೊಡ್ಡ ಕ್ರಾಂತಿಯನ್ನೇ ಮಾಡಿದರು’ ಎಂದು ಹೇಳಿದರು.

ಆದಿಚುಂಚನಗಿರಿ ಸಂಸ್ಥಾನ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ಉಪ‍ಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.