
ಬೆಂಗಳೂರು: ‘ನಾ ನಾಯಕಿ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಲು ಹೋದಾಗ ‘ನಿಮಗೆ ವೇದಿಕೆ ಹತ್ತಲು ಅನುಮತಿ ನೀಡಿಲ್ಲ ನಡೆಯಿರಿ’ ಎಂದು ಪೊಲೀಸರು ಕೈ ಹಿಡಿದು ಕೆಳಗೆ ಎಳೆದೊಯ್ದರು’ ಎಂದು ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ನಫೀಸ್ ಫಜಲ್ ಅವರು ಕಿಡಿಕಾರಿದ್ದಾರೆ.
‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ‘ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಮತ್ತು ಹಿರಿಯ ನಾಗರಿಕಳಾದ ನನ್ನನ್ನು ಈ ರೀತಿ ನಡೆಸಿಕೊಂಡಿದ್ದು ಸರಿಯಲ್ಲ. ಪಕ್ಷದ ಎಲ್ಲಾ ಮಾಜಿ ಸಚಿವೆಯರಿಗೂ ಅವಕಾಶ ಕೊಟ್ಟು, ನನಗೆ ಮಾತ್ರ ವೇದಿಕೆಗೆ ಬಿಡಬಾರದು ಎಂದು ಪೊಲೀಸರಿಗೆ ಆದೇಶ ಕೊಟ್ಟವರು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ.
‘ಮಹಿಳಾ ಕಾರ್ಯಕ್ರಮವಾದ್ದರಿಂದ, ಉಮಾಶ್ರೀ ಅವರು ಎಲ್ಲರಿಗೂ ಒಂದೇ ರೀತಿಯ ಪಾಸ್ ಕೊಟ್ಟಿದ್ದೇವೆ, ಬರಬಹುದು ಎಂದು ಹೇಳಿದ್ದರಿಂದಲೇ ವೇದಿಕೆ ಹತ್ತಲು ಹೋಗಿದ್ದೆ. ಆದರೆ, ವೇದಿಕೆ ಹತ್ತಲು ವಿಶೇಷ ಪಾಸ್ ಮಾಡಿದ್ದರು ಎಂಬ ಮಾಹಿತಿ ಗೊತ್ತಿರಲಿಲ್ಲ. ಆ ವಿಷಯ ಗೊತ್ತಿದ್ದರೆ ನಾನು ವೇದಿಕೆ ಹತ್ತಲು ಹೋಗುತ್ತಿರಲಿಲ್ಲ. ನಾನು ಬಿಜೆಪಿ ಸೇರಿದ್ದೇನೆ ಎಂದು ಪಕ್ಷದಲ್ಲೇ ಕೆಲವರು ಅಪಪ್ರಚಾರ ಮಾಡಿದ್ದಾರೆ. ನಾನು ಈಗಲೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿದ್ದೇನೆ’ ಎಂದು ಹೇಳಿದರು.
ಡಿಕೆಶಿಗೆ ಗರಂ ಸಂದೇಶ:
ತಮ್ಮನ್ನು ಆಹ್ವಾನಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿರುವ, ‘ನೀವು ಇಂದು ಈ ಸ್ಥಾನ ಏರಲು ಎಸ್.ಎಂ.ಕೃಷ್ಣ ಅವರೇ ಕಾರಣರು. ಈ ಕಾರ್ಯಕ್ರಮಕ್ಕೆ ಎಲ್ಲ ಮಾಜಿ ಸಚಿವೆಯರನ್ನು ಆಹ್ವಾನಿಸಿ, ನನ್ನೊಬ್ಬಳನ್ನು ಬಿಟ್ಟಿದ್ದೇಕೆ? ನಾನು ಮುಸ್ಲಿಂ ಮಹಿಳೆ ಎಂಬ ಕಾರಣಕ್ಕಾ? ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಮುದಾಯದಿಂದ ಸಚಿವೆ ಆಗಿದ್ದು ನಾನೊಬ್ಬಳು ಮಾತ್ರ’ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.