ADVERTISEMENT

ಜಿಲ್ಲಾವಾರು ‘ಮಾವು ಮೇಳ’ಕ್ಕೆ ಚಿಂತನೆ

ಬೆಳೆಗಾರರಿಗೆ ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಲು ಮುಂದಾದ ರಾಜ್ಯ ಮಾವು ಅಭಿವೃದ್ಧಿ ನಿಗಮ

ಮನೋಹರ್ ಎಂ.
Published 19 ಫೆಬ್ರುವರಿ 2021, 20:41 IST
Last Updated 19 ಫೆಬ್ರುವರಿ 2021, 20:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾವು ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಹಾಗೂ ಗ್ರಾಹಕರಿಗೆ ಮಾವು ತಲುಪಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಮಾವು ಮೇಳ’ ಆಯೋಜಿಸಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿ) ಚಿಂತನೆ ನಡೆಸಿದೆ.

ನಿಗಮವುಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಪ್ರತಿವರ್ಷ ಮೇ ಅಥವಾ ಜೂನ್‌ ತಿಂಗಳಿನಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮಾವು ಮೇಳ ಆಯೋಜಿಸುತ್ತಿತ್ತು. ಈಗ ಬೆಳೆಗಾರರಿಗೆ ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಲು ಜಿಲ್ಲಾವಾರು ಮೇಳ ವಿಸ್ತರಿಸಲು ಮುಂದಾಗಿದೆ.

‘ಈ ವರ್ಷ ಹೆಚ್ಚಿನ ಪ್ರಮಾಣದ ಮಾವು ಇಳುವರಿ ನಿರೀಕ್ಷಿಸಿದ್ದೇವೆ. ಮಾವು ಮೇಳದ ಮೂಲಕ ಎಲ್ಲ ಜಿಲ್ಲೆಗಳಲ್ಲಿನ ಮಾವು ಪ್ರಿಯರಿಗೆ ತರಹೇವಾರಿ ಮಾವಿನ ತಳಿಗಳನ್ನು ಪರಿಚಯಿಸುವ ಹಾಗೂ ತಲುಪಿಸುವ ಉದ್ದೇಶ ಹೊಂದಿದ್ದೇವೆ. ಮಾರ್ಚ್‌ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲಾವಾರು ಮಾವು ಮೇಳ ಆಯೋಜಿಸಲು ಯೋಜನೆ ರೂಪಿಸಿದ್ದೇವೆ’ ಎಂದುರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜಿಲ್ಲಾ ಮಟ್ಟದಲ್ಲಿ ಮೇಳ ಆಯೋಜನೆಗೆ ನಿಗಮ, ತೋಟಗಾರಿಕೆ ಇಲಾಖೆ ಹಾಗೂ ರೈತ ಉತ್ಪಾದಕ ಸಂಘಗಳು (ಎಫ್‌ಪಿಒ) ಕೈಜೋಡಿಸಲಿವೆ. ಗ್ರಾಹಕರಿಗೆ ಎಲ್ಲ ವಿಧವಾದ ಮಾವಿನ ಹಣ್ಣುಗಳು ‌ಆಯಾ ಜಿಲ್ಲೆಗಳಲ್ಲೇ ಲಭ್ಯವಾಗಲು ಮೇಳ ಸಹಕಾರಿಯಾಗಲಿದೆ. ಮೇಳದಲ್ಲಿ ಮಾವಿನ ಮಾರಾಟ ಹಾಗೂ ಪ್ರದರ್ಶನವೂ ಇರುವುದರಿಂದ ಮಾವು ಪ್ರಿಯರ ಕುತೂಹಲ ಹೆಚ್ಚಲಿದೆ’ ಎಂದರು.

15 ಲಕ್ಷ ಟನ್ ಮಾವು ಇಳುವರಿ ನಿರೀಕ್ಷೆ: ‘ರಾಜ್ಯದಲ್ಲಿ ಮಾವು ಬೆಳೆ ಕುಂಠಿತವಾಗಿದ್ದರಿಂದ ಕಳೆದ ವರ್ಷ 5ರಿಂದ 7 ಲಕ್ಷ ಟನ್‌ಗಳಷ್ಟು ಇಳುವರಿ ಆಗಿತ್ತು. ಲಾಕ್‌ಡೌನ್‌ನಿಂದಲೂ ಮಾವಿಗೆ ಮಾರುಕಟ್ಟೆ ಕೊರತೆ ಎದುರಾಗಿತ್ತು. ಈ ಬಾರಿ ಉತ್ತಮ ಮಳೆ ಹಾಗೂ ರೋಗಗಳ ನಿಯಂತ್ರಣದ ಪರಿಣಾಮವಾಗಿ ಮಾವಿನ ಮರಗಳಲ್ಲಿ ಭಾರಿ ಹೂವುಗಳು ಬಿಟ್ಟಿವೆ. ಹಾಗಾಗಿ, ಈ ವರ್ಷ ಅಂದಾಜು 15 ಲಕ್ಷ ಟನ್‌ಗಳಷ್ಟು ಮಾವು ಇಳುವರಿ ನಿರೀಕ್ಷಿಸಲಾಗಿದೆ’ ಎಂದುಕೆ.ವಿ.ನಾಗರಾಜ್‌ ಮಾಹಿತಿ ನೀಡಿದರು.

‘ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳು. ಮಾವು ಬೆಳೆಯದ ಜಿಲ್ಲೆಗಳಲ್ಲಿ ಮಾವು ಮೇಳಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದೂ ಹೇಳಿದರು.

ಬಜೆಟ್‌ನಲ್ಲಿ ₹ 20 ಕೋಟಿಗೆ ಬೇಡಿಕೆ
‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಾವು ಮೇಳ ಆಯೋಜನೆ ಹಾಗೂ ಮಾವು ಬೆಳೆಗಾರರಿಗೆ ವಿವಿಧ ಮಾರ್ಗಗಳಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ ಈ ಬಜೆಟ್‌ನಲ್ಲಿ ನಿಗಮಕ್ಕೆ ₹20 ಕೋಟಿ ಅನುದಾನ ಮೀಸಲು ಇಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದುನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್‌ ತಿಳಿಸಿದರು.

‘ಮಾವನ್ನು ನೈಸರ್ಗಿಕವಾಗಿ ಹಣ್ಣು ಮಾಡುವ ವಿಧಾನದ ತರಬೇತಿ ಹಾಗೂ ಅದಕ್ಕೆ ಬೇಕಾಗುವ ಪರಿಕರಗಳನ್ನು ರಿಯಾಯಿತಿಯಲ್ಲಿ ನೀಡುವುದು ಸೇರಿದಂತೆ ನಿಗಮವು ಬೆಳೆಗಾರರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಅನುದಾನ ಬಂದ ನಂತರ ಯೋಜನೆಗಳೆಲ್ಲ ಕಾರ್ಯರೂಪಕ್ಕೆ ಬರಲಿವೆ’ ಎಂದರು.

ಆನ್‌ಲೈನ್‌ನಲ್ಲಿ 100 ಟನ್ ಮಾವು ಮಾರಾಟ
‘ರೈತರಿಂದ ಗ್ರಾಹಕರ ಮನೆ ಬಾಗಿಲಿಗೆ ಮಾವು ತಲುಪಿಸಲುರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು‘ಕಾರ್‌ಸಿರಿ ಮ್ಯಾಂಗೋಸ್‌’ ಎಂಬ ಆನ್‌ಲೈನ್‌ ಪೋರ್ಟಲ್‌ ಆರಂಭಿಸಿತ್ತು. ಲಾಕ್‌ಡೌನ್‌ ಅವಧಿಯಲ್ಲಿ ಅಂಚೆ ಇಲಾಖೆಯ ಸಹಕಾರದಿಂದ 100 ಟನ್‌ಗಳಷ್ಟು ಮಾವಿನ ಹಣ್ಣನ್ನುಬೆಂಗಳೂರಿನ ಮಾವು ಪ್ರಿಯರಿಗೆ ತಲುಪಿಸಲಾಯಿತು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ಮಾಹಿತಿ ನೀಡಿದರು.

‘ನಗರದಲ್ಲಿ 36 ಸಾವಿರ ಮಂದಿ ಮಾವು ತರಿಸಿಕೊಂಡಿದ್ದರು. ಒಟ್ಟು 98 ಪಿನ್‌ಕೋಡ್‌ಗಳ ವಿಳಾಸಕ್ಕೆ ವಿವಿಧ ತಳಿಯ ಮಾವು ಪೂರೈಕೆಯಾಗಿತ್ತು. ಪೋರ್ಟಲ್‌ಗೆಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಈ ಬಾರಿಯೂ ಆನ್‌ಲೈನ್ ಮಾರಾಟ ಇರಲಿದೆ. ಕೊರೊನಾ ನಿಯಂತ್ರಣಕ್ಕೆ ಬಂದರೆ, ಗ್ರಾಹಕರನ್ನು ಮಾವಿನ ತೋಟಗಳಿಗೆ ಕರೆದೊಯ್ಯುವ ‘ಮಾವು ಪ್ರವಾಸ’ ಏರ್ಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.