
ಬೀದರ್: ಹುಮನಾಬಾದಿನ ಆರ್‌ಟಿಒ ಚೆಕ್‌ಪೋಸ್ಟ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು, ಮಾರಕಾಸ್ತ್ರಗಳಿಂದ ಹೆದರಿಸಿ ಹಣ ವಸೂಲಿ ಮಾಡಿದ ಪ್ರಕರಣವನ್ನು ಎರಡುವರೆ ಗಂಟೆಗಳಲ್ಲಿ ಭೇದಿಸಿರುವ ಬೀದರ್ ಜಿಲ್ಲಾ ಪೊಲೀಸರು ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಮಾರಕಾಸ್ತ್ರ, ₹2,500 ನಗದು, ಒಂದು ಸ್ಕೂಟಿ, 21 ಎಮ್ಮೆಗಳೊಂದಿಗೆ ಐಚರ್ ವಾಹನ ಜಪ್ತಿ ಮಾಡಲಾಗಿದೆ. ಘಟನೆ ಸಂಬಂಧ ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಗರದಲ್ಲಿ ಗುರುವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬುಧವಾರ (ಫೆ.21) ತೆಲಂಗಾಣದ ಸಂಗಾರೆಡ್ಡಿ ಮಾರುಕಟ್ಟೆಯಲ್ಲಿ 21 ಎಮ್ಮೆಗಳನ್ನು ಖರೀದಿಸಿ, ಐಚರ್ ವಾಹನದಲ್ಲಿ ಕಲಬುರಗಿ ಕಡೆಗೆ ಹೊರಟಿದ್ದರು. ತಡರಾತ್ರಿ ಮೂವರು ಆರೋಪಿಗಳು ಹುಮನಾಬಾದಿನ ಹಳೆ ಆರ್‌ಟಿಒ ಚೆಕ್‌ಪೋಸ್ಟ್ ಬಳಿ ವಾಹನವನ್ನು ತಡೆದು, ವಾಹನ ಚಾಲಕನ ಅಂಗಿ ಹಿಡಿದು ಲಾರಿಯಿಂದ ಕೆಳಗಿಳಿಸಿ, ಆತನ ಜೇಬಿನಿಂದ ₹3,000 ನಗದು ಹಾಗೂ ಮೊಬೈಲ್ ಕಿತ್ತುಕೊಂಡಿದ್ದಾರೆ. ಲಾರಿ ಮಾಲೀಕನಿಗೆ ಕರೆ ಮಾಡಿ, ₹2 ಲಕ್ಷ ಕೊಡಬೇಕೆಂದು ಹೆದರಿಸಿದ್ದಾರೆ. ಇಲ್ಲವಾದರೆ ಕೊಲೆ ಮಾಡಲಾಗುವುದು ಎಂದು ಮಾರಕಾಸ್ತ್ರಗಳನ್ನು ಕುತ್ತಿಗೆಗೆ ಹಿಡಿದು ಬೆದರಿಕೆ ಹಾಕಿದ್ದಾರೆ. ಬಳಿಕ ಲಾರಿ ಚಾಲಕ ನಿತಿನ್ ಹಾಗೂ ಜೊತೆಗಿದ್ದ ಇಲಿಯಾಸ್ ಎಂಬಾತನನ್ನು ಸ್ಕೂಟಿ ಮೇಲೆ ಕೂರಿಸಿಕೊಂಡು ಬೇರೆಡೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ನಿತಿನ್ ತಪ್ಪಿಸಿಕೊಂಡು, ಗಸ್ತಿನಲ್ಲಿದ್ದ ಹುಮನಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಹುಮನಾಬಾದ್ ಡಿವೈಎಸ್ಪಿ ಮಡೋಳಪ್ಪ, ಸಿಬ್ಬಂದಿ ಗೌತಮ್, ಮುಡಬಿ ಠಾಣೆಯ ವೀರಭದ್ರ, ಮಂಠಾಳ ಠಾಣೆಯ ಜೀಪ್ ಚಾಲಕ ರಾಜಕುಮಾರ ಅವರನ್ನು ಒಳಗೊಂಡ ತಂಡ ರಚಿಸಿ, ನಸುಕಿನ ಜಾವ 4.30ರ ಸುಮಾರಿಗೆ ಹುಮನಾಬಾದಿನ ಐ.ಬಿ. ಕ್ರಾಸ್ ಬಳಿ ವಾಹನವನ್ನು ತಡೆದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಕಾರ್ಯ ಶ್ಲಾಘನಾರ್ಹ ಎಂದು ಪ್ರಶಂಸಿಸಿದರು.
ಮಾದಕ ವಸ್ತು ಜಪ್ತಿ; ನಾಲ್ವರ ಬಂಧನ
ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, ನಾಲ್ಕು ದ್ವಿಚಕ್ರ ವಾಹನ ಸೇರಿದಂತೆ ₹3.5 ಲಕ್ಷ ಮೌಲ್ಯದ ಮಾದಕ ವಸ್ತು ಒಳಗೊಂಡಿರುವ ಗುಳಿಗೆ, ಸಿರಪ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೀದರ್ ತಾಲ್ಲೂಕಿನ ಬೆನಕನಳ್ಳಿ
ಮರಕಲ್ ರಸ್ತೆಯ ಮೂಲಕ ಆರೋಪಿತರು ಮೋಟಾರ್ ಸೈಕಲ್‌ಗಳ ಮೇಲೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು. ವಿವಿಧ ಕಂಪನಿಗೆ ಸೇರಿದ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಮಾದಕ ವಸ್ತುವಿನ ಅಂಶ ಒಳಗೊಂಡಿರುವ ಸಿರಪ್, ಟ್ಯಾಬ್ಲೆಟ್ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಸೆನ್ ಡಿವೈಎಸ್‌ಪಿ ಎಸ್.ಎನ್. ಸನದಿ, ಬೀದರ್ ಗ್ರಾಮೀಣ ಠಾಣೆ ಸಿಪಿಐ ಜಿ.ಎಸ್. ಬಿರಾದಾರ, ಪಿಎಸ್‌ಐಗಳಾದ ಬಾಷಾಮಿಯಾ ಪಿ, ಎಎಸ್‌ಐ ವಿಜಯಕುಮಾರ್, ಸಿಬ್ಬಂದಿ ವಿಷ್ಣುರಡ್ಡಿ, ವಿಜಯಕುಮಾರ್, ಶಿವಕುಮಾರ್, ಬಾಬುಶೆಟ್ಟಿ, ಅನಿಲ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದರು. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.