ADVERTISEMENT

ಮೂರು ಉಪಚುನಾವಣೆ: ‘ಗೆಲುವಿನ ದಡ ಸೇರಿಸಲು ಆದ್ಯತೆ’– ಬಿಜೆಪಿಗೆ ಪ್ರತಿಷ್ಠೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 19:31 IST
Last Updated 14 ಏಪ್ರಿಲ್ 2021, 19:31 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ದಡ ಸೇರಲು ಏದುಸಿರು ಬಿಡುತ್ತಿರುವ ಕಾರಣ ಅವರ ನೆರವಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಧಾವಿಸಿದ್ದಾರೆ.

ಈ ಮೂರು ಕ್ಷೇತ್ರಗಳಲ್ಲಿ ಹೆಚ್ಚು ಬಾರಿ ಪ್ರಚಾರಕ್ಕೆ ಹೋಗಿರುವುದು ಮಾತ್ರವಲ್ಲದೆ, ಅಭ್ಯರ್ಥಿಗಳ ಗೆಲುವಿಗೆ ತಮ್ಮದೇ ಆದ ಕಾರ್ಯತಂತ್ರವನ್ನೂ ರೂಪಿಸಿದ್ದಾರೆ. ವಿವಿಧ ಸಮುದಾಯದ ಜನರ ಮನವೊಲಿಸುವ ಮೂಲಕ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ ನಡೆದ ಆರ್‌.ಆರ್‌.ನಗರ ಮತ್ತು ಸಿರಾ ವಿಧಾನಸಭೆ ಉಪಚುನಾವಣೆಗಳ ಸಂದರ್ಭದಲ್ಲಿ ಯಡಿಯೂರಪ್ಪ ಅತ್ತ ಮುಖ ಹಾಕಿರಲಿಲ್ಲ. ಆಗ ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸವಿತ್ತು. ಆದರೆ, ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಪಕ್ಷದಲ್ಲಿದ್ದು ಹೊರ ಹೋದವರೇ ಮುಳುವಾಗಿದ್ದಾರೆ. ಮಸ್ಕಿಯಲ್ಲಿ ಬಿಜೆಪಿ ತೊರೆದ ಬಸನಗೌಡ ತುರವೀಹಾಳ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಬಸವಕಲ್ಯಾಣದಲ್ಲಿ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಖೂಬಾ ಅವರು ಅಪಾರ ಜನಸಮೂಹವನ್ನು ಸೆಳೆಯುತ್ತಿರುವುದು ಪಕ್ಷದ ನಾಯಕರಿಗೆ ತಲೆನೋವು ತಂದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ADVERTISEMENT

ಮೂರು ಕ್ಷೇತ್ರಗಳಲ್ಲಿ ಪರಿಸ್ಥಿತಿ ಕಠಿಣವಾಗುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಸ್ಕಿ ಮತ್ತು ಬಸವಕಲ್ಯಾಣಗಳಲ್ಲಿ ಒಟ್ಟು 10 ದೊಡ್ಡ ಮತ್ತು ಸಣ್ಣ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಇದೇ ತಿಂಗಳ 5 ರಿಂದ ನಿರಂತರ ಚುನಾವಣಾ ಪ್ರಚಾರ ನಡೆಸಿದ್ದಾರೆ. ನಾಳೆ ಪ್ರಚಾರದ ಕೊನೆ ದಿನವಾಗಿದ್ದು, ನಾಳೆಯೂ ಪ್ರಚಾರ ಮಾಡಲಿದ್ದಾರೆ.

ಮಸ್ಕಿಯಲ್ಲಿ ಬಿ.ವೈ.ವಿಜಯೇಂದ್ರ ಅವರು ಚುನಾವಣಾ ಉಸ್ತುವಾರಿ ವಹಿಸಿಕೊಂಡ ಬಳಿಕ, ಪರಿಸ್ಥಿತಿ ಸುಧಾರಣೆಯಾಗಿದೆ. ಆರಂಭದಲ್ಲಿ ಕಾಂಗ್ರೆಸ್‌–ಬಿಜೆಪಿ ಮಧ್ಯೆ ಅಂತರ ದೊಡ್ಡದಾಗಿತ್ತು. ಈಗ ಅದು ಸಮಬಲವಾಗಿ ಮಾರ್ಪಟ್ಟಿದೆ. ಅದನ್ನು ಗೆಲುವಿನತ್ತ ಒಯ್ಯಲು ಯಡಿಯೂರಪ್ಪ ಅವರನ್ನು ನೆಚ್ಚಿಕೊಳ್ಳಲಾಗಿದೆ ಎಂದು ಮೂಲಗಳುತಿಳಿಸಿವೆ.

ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಬಿಜೆಪಿಯ ಮಂಗಲಾ ಅಂಗಡಿ ಅವರಿಗೆ ಕಠಿಣ ಸ್ಪರ್ಧೆ ಒಡ್ಡಿರುವ ಕಾರಣ, ಅಲ್ಲಿಯೂ ಮುಖ್ಯಮಂತ್ರಿಯವರು ಹೆಚ್ಚಿನ ಚುನಾವಣಾ ಪ್ರಚಾರ ಸಭೆ ನಡೆಸಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಬೆಳಗಾವಿ ಲೋಕಸಭಾ ಕ್ಷೇತ್ರ ಕೊಂಚ ಸುಲಭದ ಕ್ಷೇತ್ರ. ಆದರೂ ನಿರ್ಲಕ್ಷಿಸುವುದು ಬೇಡ ಎಂಬ ಕಾರಣಕ್ಕೆ ಯಡಿಯೂರಪ್ಪ ಹಲವು ಬಾರಿ ಪ್ರಚಾರ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಹೊಣೆಗಾರಿಕೆಯಿಂದ ಪ್ರಚಾರ’

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಲುವ ಭೀತಿ ಏನಿಲ್ಲ. ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಇಲ್ಲಿಗೆ ಬಂದು ಪಕ್ಷದ ಅಭ್ಯರ್ಥಿ ಪರವಾಗಿ ಮತ ಕೇಳುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲ್ಲಿ ಬುಧವಾರ ಹೇಳಿದರು.

‘ಅವರ ಪಕ್ಷದ ಅಭ್ಯರ್ಥಿ ಸೋಲುವ ಭೀತಿಯಿಂದಾಗಿ ಮುಖ್ಯಮಂತ್ರಿ ಆಗಾಗ ಪ್ರಚಾರಕ್ಕೆ ಬರುತ್ತಿದ್ದಾರೆ’ ಎಂಬ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.