
ಶಿವರಾಜ್ ತಂಗಡಗಿ
ಬೆಂಗಳೂರು: ‘ರಾಜ್ಯದಲ್ಲಿ ತಿಗಳ, ವಹ್ನಿಕುಲ ಕ್ಷತ್ರಿಯ ಸೇರಿದಂತೆ ಇತರ ಉಪಜಾತಿಗಳಿಗೆ ಪ್ರತ್ಯೇಕ ಕ್ರಮ ಸಂಖ್ಯೆ ನೀಡಿ, ಜಾತಿ ಪಟ್ಟಿಗಳಲ್ಲಿ ಸೇರಿಸುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಮನವಿ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಜೆಡಿಎಸ್‌ನ ಶಾರದಾ ಪೂರ್‍ಯಾನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ತಂಗಡಗಿ, ‘ಈ ಹಿಂದೆ ಜಾತಿ ಆಧಾರಿತ ಜನಗಣತಿ ಸಂಬಂಧ ಕಾಂತರಾಜ ವರದಿ, ಜಯಪ್ರಕಾಶ್ ಹೆಗ್ಡೆ ವರದಿಗಳನ್ನು ಸರ್ಕಾರ ಸ್ವೀಕರಿಸಿದ್ದರೂ ಅನುಷ್ಠಾನ ಸಾಧ್ಯವಾಗಿಲ್ಲ. ಇದೀಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮಧುಸೂದನ್ ನಾಯಕ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಸಮೀಕ್ಷೆ ಮಾಡಲಾಗಿದೆ. ಸಮೀಕ್ಷಾ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆ
ಆಗಿಲ್ಲ. ಹೀಗಾಗಿ ತಿಗಳ, ವಹ್ನಿಕುಲ ಕ್ಷತ್ರಿಯ ಸೇರಿದಂತೆ ಇತರ ಉಪಜಾತಿಗಳಿಗೆ ಪ್ರತ್ಯೇಕ ಕ್ರಮ ಸಂಖ್ಯೆ ನೀಡುವ ಕುರಿತಂತೆ ಆಯೋಗಕ್ಕೆ ಮನವಿ ಸಲ್ಲಿಸಿದರೆ, ಆಯೋಗವು ಸಾರ್ವಜನಿಕ ವಿಚಾರಣೆ ನಡೆಸಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.