
ಬೆಂಗಳೂರು: ಕಳೆದ ನಾಲ್ಕು ತಿಂಗಳಲ್ಲಿ ಬಂಡೀಪುರ–ನಾಗರಹೊಳೆ–ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ 25 ಹುಲಿಗಳನ್ನು ಸೆರೆ ಹಿಡಿದಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ಈ ಬಗ್ಗೆ ವಿವರಣೆ ನೀಡುವಂತೆ ರಾಜ್ಯದ ಅರಣ್ಯ ಇಲಾಖೆಗೆ ತಾಕೀತು ಮಾಡಿದೆ.
ಈ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಿರುವ ಎನ್‌ಟಿಸಿಎ, ಜನವರಿ 27 ರಂದು ಮುಖ್ಯ ವನ್ಯಜೀವಿ ಪಾಲಕರಿಗೆ ಪತ್ರ ಬರೆದಿದೆ.
ಎನ್‌ಟಿಸಿಎ ಶಾಸನಬದ್ಧ ಸಂಸ್ಥೆಯಾಗಿದ್ದು, ರಾಜ್ಯಗಳ ಅರಣ್ಯ ಇಲಾಖೆ ಅಥವಾ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಅಧಿಕಾರ ಹೊಂದಿದೆ. ಆ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯ. ಮಾನವ–ಹುಲಿ ಸಂಘರ್ಷದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ವೈಜ್ಞಾನಿಕವಾಗಿ ನಿಭಾಯಿಸಿದ್ದೀರಾ ಎಂಬ ಪ್ರಶ್ನೆಯನ್ನೂ ಕೇಳಿದೆ.
‘ಇತ್ತೀಚಿನ 3–4 ತಿಂಗಳಲ್ಲಿ ಬಂಡೀಪುರ–ನಾಗರಹೊಳೆ ಮತ್ತು ಬಿಆರ್‌ಟಿಯಲ್ಲಿ ಹುಲಿಗಳನ್ನು ಸೆರೆ ಹಿಡಿಯುತ್ತಿರುವ ಪ್ರಕರಣ ಅಸಹಜ ಎಂಬ ರೀತಿಯಲ್ಲಿ ಏರಿಕೆಯಾಗಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ 27 ಪ್ರಕರಣಗಳು ವರದಿಯಾಗಿವೆ. ಸೆರೆ ಹಿಡಿಯುವಿಕೆಯ ಪ್ರಕರಣ ಹಠಾತ್ ಏರಿಕೆ ಆಗಿರುವುದು ಸಂಬಂಧಪಟ್ಟ ಎಲ್ಲರ ಗಮನ ಸೆಳೆದಿದೆ’ ಎಂದು ಪತ್ರದಲ್ಲಿ ತಿಳಿಸಿದೆ.
ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪರಿಸರ ಧಾರಣ ಸಾಮರ್ಥ್ಯವನ್ನು ಮೀರಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಸಂಕಥನವನ್ನೂ ಎನ್‌ಟಿಸಿಎ ಪ್ರಶ್ನಿಸಿದೆ. ಈ ಬಗ್ಗೆ ಲಭ್ಯವಿರುವ ವೈಜ್ಞಾನಿಕ ಅಂದಾಜನ್ನೂ ಎನ್‌ಟಿಸಿಎ ಪರಿಶೀಲನೆಗೆ ಒಳಪಡಿಸಿದೆ. ಆ ಪ್ರಕಾರ ಬಂಡೀಪುರದಲ್ಲಿ 110 ಹುಲಿಗಳಿವೆ. ಅಲ್ಲಿ 229 ಹುಲಿಗಳಿಗೆ ಆಶ್ರಯವಾಗುವ ಸಾಮರ್ಥ್ಯ ಹೊಂದಿದೆ. ನಾಗರಹೊಳೆಯಲ್ಲಿ 135 ಹುಲಿಗಳಿದ್ದು, ಅಲ್ಲಿ 170 ಹುಲಿಗಳಿಗೆ ಆಶ್ರಯ ನೀಡಬಹುದು. ಬಿಆರ್‌ಟಿ ಹುಲಿ ಸಂರಕ್ಷಿತದಲ್ಲಿ 29 ಹುಲಿಗಳಿದ್ದು, 81 ಹುಲಿಗಳಿಗೆ ಆಶ್ರಯ ನೀಡುವ ಅವಕಾಶವಿದೆ. ನೆರೆಯ ತಮಿಳುನಾಡಿನ ಮದುಮಲೈನಲ್ಲಿ 58 ಹುಲಿಗಳಿದ್ದು, 92 ಹುಲಿಗಳಿಗೆ ಆಶ್ರಯ ಸಾಮರ್ಥ್ಯವಿದೆ. ಅಚ್ಚರಿ ಎಂದರೆ ಮದುಮಲೈನಲ್ಲಿ ಈ ಅವಧಿಯಲ್ಲಿ ಕೇವಲ ಒಂದು ಹುಲಿಯನ್ನು ಮಾತ್ರ ಸೆರೆ ಹಿಡಿಯಲಾಗಿದೆ ಎಂದು ಎನ್‌ಟಿಸಿಎ ಹೇಳಿದೆ.
ಮಾನವನ ಸುರಕ್ಷತೆಯ ಅತಿ ಮುಖ್ಯ. ಅದರ ಜತೆಗೆ ಆ ಪ್ರದೇಶದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರಲು ಕಾರಣಗಳನ್ನು ತಿಳಿದುಕೊಳ್ಳಬೇಕು. ಅಲ್ಲದೆ, ಜಾಗ್ರತೆ ಮತ್ತು ವಸ್ತುನಿಷ್ಠ ವಿಮರ್ಶೆಯೂ ಆಗಬೇಕಿದೆ ಎಂದು ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಿಸಿಸಿಎಫ್ (ಅರಣ್ಯ) ಕುಮಾರ್ ಪುಷ್ಕರ್, ಸಂಘರ್ಷದ ಸನ್ನಿವೇಶವನ್ನು ಆಧರಿಸಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತದೆ. ಪ್ರತಿಯೊಂದು ಕಾರ್ಯಾಚರಣೆ ಕುರಿತು ಎನ್‌ಟಿಸಿಎಗೆ ಮಾಹಿತಿ ನೀಡಲಾಗುತ್ತದೆ. ಮಾನವರ ಮೇಲಿನ ದಾಳಿಯನ್ನು ತಡೆಯುವುದರ ಜತೆಗೆ, ಮಾನವ– ವನ್ಯಜೀವಿ ಸಂಘರ್ಷವನ್ನು ತಗ್ಗಿಸಬೇಕಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.