ADVERTISEMENT

ಮುಸ್ಲಿಮರನ್ನು ದೇಶದಿಂದ ಆಚೆ ಕಳುಹಿಸಲಿ ನೋಡೋಣ: ಸಚಿವ ಶ್ರೀನಿವಾಸ್‌ ಸವಾಲು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 8:48 IST
Last Updated 10 ನವೆಂಬರ್ 2018, 8:48 IST
ಎಸ್‌.ಆರ್. ಶ್ರೀನಿವಾಸ್
ಎಸ್‌.ಆರ್. ಶ್ರೀನಿವಾಸ್   

ದಾವಣಗೆರೆ: ‘ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸುವ ವ್ಯಕ್ತಿಗಳು ಎಲ್ಲಾ ಮುಸಲ್ಮಾನರನ್ನು ದೇಶದಿಂದ ಆಚೆ ಕಳುಹಿಸಲಿ ನೋಡೋಣ’ ಎಂದು ಸಣ್ಣ ಕೈಗಾರಿಕೆಗಳ ಸಚಿವ ಎಸ್‌.ಆರ್‌. ಶ್ರೀನಿವಾಸ್‌ (ವಾಸು), ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಸವಾಲು ಹಾಕಿದರು.

ಜಿಲ್ಲಾಡಳಿತ ಶನಿವಾರ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಉದ್ಘಾಟಿಸಿದ ಅವರು, ‘ಪ್ರಪಂಚದ ಎಲ್ಲಾ ಕಡೆ ಮುಸ್ಲಿಮರು ಬದುಕು ಕಟ್ಟಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿಂದ ಅವರನ್ನು ಆಚೆಗೆ ದಬ್ಬಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಸಮಾಜಕ್ಕೆ ಟಿಪ್ಪು ಏನೂ ಕೊಡುಗೆ ನೀಡಿಲ್ಲವೇ? ಏಕೆ ವಿರೋಧಿಸುತ್ತಿದ್ದಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ತಾವು ಅಧಿಕಾರಕ್ಕೆ ಬರಲು ಮತ ಬ್ಯಾಂಕ್‌ಗಾಗಿ ಜನಾಂಗದ ನಡುವೆ ದ್ವೇಷ ಹುಟ್ಟಿಸಿ, ಭಿನ್ನಾಭಿಪ್ರಾಯ ಮೂಡಿಸುವ ನೀಚ ಕೆಲಸ ಮಾಡುತ್ತಿರುವುದನ್ನು ಎಲ್ಲರೂ ಖಂಡಿಸಬೇಕು. ಜಯಂತಿ ವಿರೋಧಿಸುವುದರಿಂದ ಏನೂ ಗಳಿಸಲು ಸಾಧ್ಯವಿಲ್ಲ. ಹಿಂದೂಗಳೆಲ್ಲ ಒಂದು ಕಡೆ ಬರುತ್ತಾರೆ; ಅಧಿಕಾರಕ್ಕೆ ತಾವು ಬರುತ್ತೇವೆ ಎಂದುಕೊಂಡರೆ ಅದು ನಿಮ್ಮ ದುರಾಲೋಚನೆ ಅಷ್ಟೆ’ ಎಂದು ಸಚಿವರು ಬಿಜೆಪಿ ನಾಯಕರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು.

ADVERTISEMENT

‘ಒಂದು ಕಡೆ ಟಿಪ್ಪು ಜಯಂತಿ ಆಚರಿಸಬೇಡಿ ಎಂದು ಹೇಳುತ್ತೀರಿ. ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಹಿಂದೂಸ್ಥಾನದಲ್ಲಿ ಎಲ್ಲರೂ ಸಮಾನವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶವಿದೆ ಎನ್ನುತ್ತಾರೆ. ಇದು ನಿಮ್ಮ ಡೋಂಗಿ ಅವತಾರ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ’ ಎಂದು ಪ್ರಶ್ನಿಸಿದರು.

‘ಮಹಾತ್ಮ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವುದು ಯಾವುದೋ ಒಂದು ಧರ್ಮ–ಜಾತಿಗೋಸ್ಕರ ಅಲ್ಲ. ಎಲ್ಲ ಜನರು ಶಾಂತಿಯಿಂದ ಬದುಕಲಿ ಎಂಬ ಉದ್ದೇಶ ಅದರ ಹಿಂದೆ ಇತ್ತು. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ. ಅದರಂತೆ ಇವರಿಗೂ (ಮುಸ್ಲಿಮರು) ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಲು ಅವಕಾಶ ಮಾಡಿಕೊಡಬೇಕು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.