ಬೆಂಗಳೂರು: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ರೈತರ ಜೀವ ಹಿಂಡುತ್ತಿದೆ. ರೈತರ ಮಾರುಕಟ್ಟೆಯನ್ನು ಹಾಳುಗೆಡವುತ್ತಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕೇಂದ್ರದ ತೊಗರಿ ಬೇಳೆ ಆಮದು ನೀತಿಯಿಂದಾಗಿ ರಾಜ್ಯದ ತೊಗರಿ ಬೆಳೆಗಾರರು ವಾರ್ಷಿಕವಾಗಿ ₹ 1,550 ಕೋಟಿ ಕಳೆದುಕೊಳ್ಳುತ್ತಿದ್ದಾರೆ’ ಎಂದರು.
‘ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವ ಪ್ರಲ್ಹಾದ ಜೋಶಿ, ವಿ. ಸೋಮಣ್ಣ ಏನು ಮಾಡುತ್ತಿದ್ದಾರೆ? ಕೇಂದ್ರ ಸರ್ಕಾರ ಕರ್ನಾಟಕದ ರೈತರ ಕತ್ತು ಹಿಸುಕುತ್ತಿದ್ದರೂ ಎಚ್.ಡಿ. ಕುಮಾರಸ್ವಾಮಿ ಏನೂ ಮಾತನಾಡದೆ ಸುಮ್ಮನಿದ್ದಾರೆ’ ಎಂದರು.
‘ಮೋಜಾಂಬಿಕ್, ಮ್ಯಾನ್ಮಾರ್, ಕೆನಡಾ, ಆಸ್ಟ್ರೇಲಿಯಾ ದೇಶದ ರೈತರಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ತೆರಿಗೆ ರಹಿತವಾಗಿ 2021ರ ಮೇ 16ರಂದು ತೊಗರಿಯನ್ನು ಕೇಂದ್ರ ಆಮದು ಮಾಡಿಕೊಂಡಿದೆ. ಯಾವುದೇ ದೇಶದಿಂದ ತೊಗರಿ ತೆಗೆದುಕೊಳ್ಳಬಹುದು ಎಂದು ನಿಯಮ ರೂಪಿಸಲಾಗಿದೆ. ಈ ನೀತಿಯಿಂದಾಗಿ ಕಳೆದ ಐದು ವರ್ಷಗಳಿಂದ ತೊಗರಿ ಬೆಳೆಗಾರರಿಗೆ ವಂಚನೆ ಆಗುತ್ತಿದೆ’ ಎಂದರು.
‘ಜ. 20ರಂದು ಹೊಸ ಸುತ್ತೋಲೆಯನ್ನು ಹೊರಡಿಸಿದ್ದ ಕೇಂದ್ರ ಸರ್ಕಾರ 2026ರ ಮಾರ್ಚ್ 31ರವರೆಗೆ ಆಮದು ಸುಂಕರಹಿತವಾಗಿ ಆಮದು ಮಾಡಿಕೊಳ್ಳಬಹುದು ಎಂದೂ ಹೇಳಿದೆ. ದೇಶದ ಶೇ 50ರಷ್ಟು ತೊಗರಿಯನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕ ಉತ್ಪಾದನೆ ಮಾಡುತ್ತವೆ. ಬೀದರ್, ಕಲಬುರಗಿ, ರಾಯಚೂರು, ಮಹಾರಾಷ್ಟ್ರದ ಲಾಥೂರ್‌ನಲ್ಲಿ ತೊಗರಿ ಬೆಳೆಗಾರರು ಇದ್ದಾರೆ. ಬಿಜೆಪಿ ಸರ್ಕಾರಕ್ಕೆ ದೇಶದ, ಕರ್ನಾಟಕದ ರೈತರು ಬೇಡವೇ’ ಎಂದೂ ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.