ADVERTISEMENT

ಬಯಲು ಶೌಚ ತಡೆಗೆ ‘ಸ್ಮಶಾನ ವಾಸ್ತವ್ಯ’

ಗುರಿ ಸಾಧನೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿನೂತನ ಪ್ರಯತ್ನ

ಅಮರ್ ಎ.ಇಂಗಳೆ
Published 27 ಮೇ 2019, 20:00 IST
Last Updated 27 ಮೇ 2019, 20:00 IST
ಬಯಲು ಶೌಚ ತಡೆಯಲು ಸಸಾಲಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭರಮು ಉಳ್ಳಾಗಡ್ಡಿ ಹಾಗೂ ಸಂಗಡಿಗರು ಸ್ಮಶಾನದಲ್ಲಿ ಅಹೋರಾತ್ರಿ ವಾಸ್ತವ್ಯ ಹೂಡಿರುವುದು
ಬಯಲು ಶೌಚ ತಡೆಯಲು ಸಸಾಲಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭರಮು ಉಳ್ಳಾಗಡ್ಡಿ ಹಾಗೂ ಸಂಗಡಿಗರು ಸ್ಮಶಾನದಲ್ಲಿ ಅಹೋರಾತ್ರಿ ವಾಸ್ತವ್ಯ ಹೂಡಿರುವುದು   

ತೇರದಾಳ (ಬಾಗಲಕೋಟೆ ಜಿಲ್ಲೆ):ಬಯಲು ಶೌಚ ತಡೆಯಲು ಸಸಾಲಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭರಮು ಉಳ್ಳಾಗಡ್ಡಿ ಸ್ಮಶಾನದಲ್ಲಿ ‘ಗಾಂಧಿಗಿರಿ’ ತಂತ್ರ ಬಳಸಲು ಯೋಜಿಸಿದ್ದಾರೆ.

ಬಯಲು ಶೌಚಕ್ಕೆ ಮಸಣದತ್ತ ಬರುತ್ತಿದ್ದ ಪುರುಷರ ಅಭ್ಯಾಸ ತಪ್ಪಿಸಲು, ಸ್ಮಶಾನ ಸ್ವಚ್ಛಗೊಳಿಸಿ, ಸಂಗಡಿಗರೊಂದಿಗೆ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಈ ಸಂದರ್ಭದಲ್ಲಿ ಚೊಂಬಿನೊಂದಿಗೆ ಬಂದವರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ.

ಸಸಾಲಟ್ಟಿ ಗ್ರಾಮದಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯವಿದೆ. ಈ ಹಿಂದೆ ಮಹಿಳೆಯರಿಗೆ ಶೌಚಾಲಯದ ದಾರಿ ತೋರಲು, ಕಾವಲುಗಾರರನ್ನು ನೇಮಿಸಿದ್ದರು.

ADVERTISEMENT

ಪುರುಷರಿಗಾಗಿ ಕಳೆದ ವರ್ಷ ನರೇಗಾ ಯೋಜನೆಯಲ್ಲಿ ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ರೂಢಿಯಂತೆ ಸ್ಮಶಾನದ ಸುತ್ತಲಿನ ಬಯಲನ್ನೇ ಆಶ್ರಯಿಸಿದ್ದರು. ಅದೆಷ್ಟೇ ತಿಳಿಹೇಳಿದರೂ ಅಭ್ಯಾಸ ಬಿಡದ ಪುರುಷರ ಮನ ಒಲಿಸಲು ಭರಮು ಅವರು ಕಂಡುಕೊಂಡಿರುವ ಉಪಾಯವೇ ಮಸಣ ವಾಸ್ತವ್ಯ ಜಾಗೃತಿ ಸಪ್ತಾಹ.

ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿದ್ದ 2ರಿಂದ 3 ಗುಂಟೆ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳ ಸಹಾಯದಿಂದ ತೆರವುಗೊಳಿಸಿದರು. ಸ್ಮಶಾನವನ್ನು ಸಂಗಡಿಗರ ಜತೆಗೂಡಿ ಸ್ವಚ್ಛಗೊಳಿಸಿ, ರಾತ್ರಿ ಮಲಗಲು ವ್ಯವಸ್ಥೆ ಮಾಡಿಕೊಂಡರು.

ಸೌಕರ್ಯ ಕಲ್ಪಿಸಲು ಚಿಂತನೆ:ನರೇಗಾ ಯೋಜನೆಯಡಿ ₹45 ಲಕ್ಷ ವೆಚ್ಚದಲ್ಲಿ ಕಾಂಪೌಂಡ್‌ ನಿರ್ಮಾಣ, ನೀರು ಹಾಗೂ ವಿದ್ಯುತ್ ವ್ಯವಸ್ಥೆ, ಸುತ್ತಲೂ ಸಸಿಗಳನ್ನು ಬೆಳೆಸುವುದು, ವರ್ಷಕ್ಕೆ ಎರಡು ಬಾರಿ ಸ್ಮಶಾನದಲ್ಲೇ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.

ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ ಬಳಗಾರ, ಮುಖಂಡರಾದ ಪ್ರಕಾಶ ಉಳ್ಳಾಗಡ್ಡಿ, ಸುರೇಶ ಮುರಾಬಟ್ಟಿ, ಉಮೇಶ ಸಲಬನ್ನವರ, ರಾಜು ದರವಾನ, ಪ್ರಕಾಶ ಮಳ್ಳನ್ನವರ, ಸಿದ್ದಯ್ಯ ಮಠಪತಿ, ವಿನೋದ ಕಾಂಬಳೆ, ಅಡಿವೆಪ್ಪ ಪೂಜೇರಿ, ಪರಮಾನಂದ ಕಾಂಬಳೆ ಇದ್ದರು.

**

ಒಂದು ವಾರ ಇಲ್ಲೇ ಮಲಗುವೆ. ಜನರು ಶೌಚಾಲಯದತ್ತ ಮುಖ ಮಾಡಿದರೆ ಈ ವಾಸ್ತವ್ಯ ಸಾರ್ಥಕವಾಗುವುದು.
-ಭರಮು ಉಳ್ಳಾಗಡ್ಡಿ, ಅಧ್ಯಕ್ಷರು ಸಸಾಲಟ್ಟಿ ಗ್ರಾಮಪಂಚಾಯ್ತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.