ADVERTISEMENT

2026 ಜನವರಿ 18: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 2:56 IST
Last Updated 18 ಜನವರಿ 2026, 2:56 IST
   

ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಡ್ರಗ್ಸ್ ಪತ್ತೆಗೆ ಮಹಾರಾಷ್ಟ್ರ ಪೊಲೀಸರು ಬರಬೇಕಾ?: ಸಿದ್ದರಾಮಯ್ಯ ಅಸಮಾಧಾನ

‘ಮಹಾರಾಷ್ಟ್ರದ ಪೊಲೀಸರು ಬೆಂಗಳೂರು ಹಾಗೂ ಮೈಸೂರು ನಗರಕ್ಕೆ ಬಂದು ಡ್ರಗ್ಸ್ ಕಾರ್ಖಾನೆಗಳನ್ನು ಪತ್ತೆ ಹಚ್ಚಲು ಸಾಧ್ಯ ಆಗಿದ್ದರೆ, ರಾಜ್ಯದ ಪೊಲೀಸರಿಗೇಕೆ ಆ ರೀತಿಯ ಕಾರ್ಯಾಚರಣೆ ಸಾಧ್ಯವಾಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

11 ತಿಂಗಳಲ್ಲಿ ₹1.53 ಲಕ್ಷ ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

2025ರ ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ರಾಜ್ಯಕ್ಕೆ ಹೊಸದಾಗಿ ₹1.53 ಲಕ್ಷ ಕೋಟಿಯಷ್ಟು ಹೂಡಿಕೆ ಹರಿದುಬಂದಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದರು.

ADVERTISEMENT

ಲಕ್ಕುಂಡಿಯ ನಿಧಿ ಸಿಕ್ಕಿದ ಜಾಗದಲ್ಲಿ ಉತ್ಖನನ: ಪ್ರಾಚ್ಯ ಅವಶೇಷ ಗೋಚರ

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆದಿರುವ ಉತ್ಖನನದ ವೇಳೆ ಶನಿವಾರ ಪ್ರಾಚೀನ ಕಾಲದ ಶಿಲೆ ಪತ್ತೆಯಾಗಿದ್ದು, ಅರ್ಧದಷ್ಟು ಗೋಚರಿಸಿದೆ. ‘ಉತ್ಖನನ ಇನ್ನಷ್ಟು ಆಳಕ್ಕೆ ಇಳಿದರೆ, ಅದು ಏನು ಎಂಬುದರ ನಿಖರ ಮಾಹಿತಿ ಲಭ್ಯವಾಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಸೇನೆಯೋ, ಬಿಜೆಪಿಯೋ.. ಮುಂಬೈ ಮೇಯರ್ ಪಟ್ಟ ಯಾರಿಗೆ ?

‘ಮುಂಬೈನಲ್ಲಿ ಶಿವಸೇನಾ (ಯುಬಿಟಿ) ಮೇಯರ್‌ ಪಟ್ಟಕ್ಕೇರಬೇಕು ಎನ್ನುವುದು ನನ್ನ ಕನಸು. ದೇವರು ಸಹಕಾರ ನೀಡಿದರೆ ಈ ಕನಸು ನನಸಾಗುತ್ತದೆ’ ಎಂದು ಶಿವಸೇನಾ (ಯುಬಿಟಿ) ಮುಖಂಡ ಉದ್ಧವ್‌ ಠಾಕ್ರೆ ಹೇಳಿದ್ದಾರೆ. ಬಿಎಂಸಿಯಲ್ಲಿ ತನ್ನ ಮೇಯರ್‌ ಹೊಂದಬೇಕು ಎಂಬ ಬಿಜೆಪಿಯ ದೀರ್ಘ ಕಾಲದ ಕನಸು ನನಸಾಗುವ ಗಳಿಗೆ ಕೂಡಿಬಂದಿರುವ ಬೆನ್ನಲ್ಲೇ, ಠಾಕ್ರೆ ಹೇಳಿಕೆಯು ಹೊಸ ಸಂಚಲನ ಸೃಷ್ಟಿಸಿದೆ. ಮುಂಬೈನ ಮೇಯರ್‌ ಬಿಜೆಪಿಯೊ ಅಥವಾ  ಶಿವಸೇನಾ ಶಿಂದೆ ಬಣದ ಅಬ್ಯರ್ಥಿಯೋ ಎಂಬ ಚರ್ಚೆಯನ್ನೂ ಇದು ಮುನ್ನೆಲೆಗೆ ತಂದಿದೆ. 

2030ರೊಳಗೆ 800 ವಂದೇ ಭಾರತ್ ರೈಲುಗಳ ಸಂಚಾರ: ಭಾರತೀಯ ರೈಲ್ವೆ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸುವಂತೆ ಪ್ರಯಾಣಿಕರಿಂದ ಬೇಡಿಕೆ ಹೆಚ್ಚಿದ್ದು, ಇದಕ್ಕೆ ಪೂರಕವಾಗಿ ತನ್ನ ಸಂಪರ್ಕಜಾಲವನ್ನು ವಿಸ್ತರಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ. 2030ರೊಳಗೆ 800 ರೈಲುಗಳು ಹಾಗೂ 2047ರೊಳಗೆ 4,500 ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಸಂಭವಿಸಿದ ಸಾವುಗಳಿಗೆ ಟ್ರಂಪ್‌ ನೇರ ಹೊಣೆ: ಇರಾನ್ ನಾಯಕ ಖಮೇನಿ

‘ದೇಶದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಸಂಭವಿಸಿದ ಸಾವು–ನೋವು ಹಾಗೂ ಹಾನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ವಿಚಾರದಲ್ಲಿ ಅವರನ್ನು ‘ಅಪರಾಧಿ’ ಎಂಬುದಾಗಿ ಪರಿಗಣಿಸಲಾಗುವುದು’ ಎಂದು ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. 

ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಟ್ರಂಪ್ ಯತ್ನಕ್ಕೆ ಡೆನ್ಮಾರ್ಕ್ ವಿರೋಧ

ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಯತ್ನವನ್ನು ವಿರೋಧಿಸಿ ಸಾವಿರಾರು ಜನರು ಡೆನ್ಮಾರ್ಕ್‌ನ ರಾಜಧಾನಿ ಕೋಪೆನ್‌ಹೆಗನ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆಯುವ ತನ್ನ ನಿರ್ಧಾರಕ್ಕೆ ಬೆಂಬಲ ನೀಡದ ದೇಶಗಳಿಗೆ ಸುಂಕ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ನಲ್ಲಿ ಪ್ರತಿಭಟನೆ ಆರಂಭಗೊಂಡಿತು.

ಸೂರ್ಯಕುಮಾರ್ ಬಗ್ಗೆ ಹೇಳಿಕೆ: ನಟಿ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

ನಟಿ, ರೂಪದರ್ಶಿ ಖುಷಿ ಮುಖರ್ಜಿ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ನೀಡಿರುವ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸೂರ್ಯಕುಮಾರ್ ಯಾದವ್ ಅವರು ಈ ಹಿಂದೆ ನನಗೆ ಆಗಾಗ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಹೇಳಿಕೊಂಡಿದ್ದ ನಟಿ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

WPL | ಶತಕ ವಂಚಿತ ಮಂದಾನ: ಆರ್‌ಸಿಬಿ ಗೆಲುವಿನ ಓಟಕ್ಕಿಲ್ಲ ತಡೆ

ನಾಯಕಿ ಸ್ಮೃತಿ ಮಂದಾನ (96;61ಎ, 4x13, 6x3) ಅವರು ಕೇವಲ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಆದರೆ, ಅವರ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಹಾಲಿ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿತು. ಅಜೇಯ ಓಟದೊಂದಿಗೆ ಅಂಕಪ‍ಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ: ಷರತ್ತಿನೊಂದಿಗೆ ಗೃಹ ಇಲಾಖೆ ಅನುಮತಿ

ತಿಂಗಳುಗಳ ಕಾಲ ಅನಿಶ್ಚಿತ ಪರಿಸ್ಥಿತಿಯ ನಂತರ ರಾಜ್ಯದ ಗೃಹ ಇಲಾಖೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮತ್ತು ಐಪಿಎಲ್‌ ಪಂದ್ಯಗಳನ್ನು ನಡೆಸುವುದಕ್ಕೆ ಶನಿವಾರ ಷರತ್ತಿನೊಂದಿಗೆ ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.