
ಸೈಬರ್ ವಂಚನೆ
ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೂ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ದಂಡವನ್ನು ಶೇ 50ರಷ್ಟು ರಿಯಾಯಿತಿಯಲ್ಲಿ ಪಾವತಿಸಲು, ಬೆಂಗಳೂರು ಪೊಲೀಸರು ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಅವಕಾಶ ನೀಡಿದ್ದಾರೆ. ಈ ನಡುವೆ ಸೈಬರ್ ವಂಚಕರು ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ರಿಯಾಯಿತಿ ದಂಡ ಪಾವತಿಯ ಗಡುವು ಸಮೀಪಿಸುತ್ತಿದ್ದಂತೆ ಹೆಚ್ಚು ಅಲರ್ಟ್ ಆಗಿರುವ ಸೈಬರ್ ವಂಚಕರು, ಸ್ಮಾರ್ಟ್‌ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಸಂದೇಶಗಳನ್ನು ಕಳಿಸುವ ಮೂಲಕ ವಂಚನೆಯ ಬಲೆ ಬೀಸುತ್ತಿದ್ದಾರೆ.
ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸೈಬರ್ ವಂಚಕರು URL ಲಿಂಕ್‌ಗಳ ಜೊತೆಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ‘ಕೂಡಲೇ ಎಚ್ಚೆತ್ತುಕೊಳ್ಳಿ, ಸಂಚಾರಿ ನಿಯಮ ಉಲ್ಲಂಘನೆಯ ದಂಡ, ಹೆಚ್ಚುವರಿ ಶುಲ್ಕಗಳು ಅಥವಾ ಔಪಚಾರಿಕ ಕಾನೂನು ಕ್ರಮಗಳನ್ನು ತಪ್ಪಿಸಲು ಯಾವುದೇ ಹಿಂಜರಿಕೆಯಿಲ್ಲದೆ ಹಣ ಪಾವತಿಸಿ’ ಎಂಬ ಒಕ್ಕಣೆ ಇದೆ.
ಇನ್ನೊಂದು ಸಂದೇಶದಲ್ಲಿ, ‘ಎಚ್ಚರಿಕೆ’: ಈವರೆಗೂ ಪಾವತಿಯಾಗದ ಸಂಚಾರ ನಿಯಮ ಉಲ್ಲಂಘನೆಯ ದಂಡದ ಸೂಚನೆ. ಹೆಚ್ಚುವರಿ ಶುಲ್ಕ ಅಥವಾ ಕಾನೂನು ಕ್ರಮ ಕೈಗೊಳ್ಳುವ ಮೊದಲು ದಯವಿಟ್ಟು ಬಾಕಿ ಮೊತ್ತವನ್ನು ತಕ್ಷಣವೇ ಪಾವತಿಸಿ’ ಎಂದಿದೆ.
ಸೈಬರ್ ವಂಚಕರು ನಿಮ್ಮನ್ನು ಮೋಸದ ಜಾಲಕ್ಕೆ ಬೀಳಿಸಲು, ಮೊದಲು ಜನರನ್ನು ಭಯಗೊಳಿಸುತ್ತಾರೆ. ಬಳಿಕ ಜನರ ಭಾವನೆಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ಅಥವಾ ಯುಪಿಐ ಮೂಲಕ ಸ್ವಂತ ಖಾತೆಗೆ ಹಣ ವರ್ಗಾಯಿಸುವಂತೆ ಕೇಳುತ್ತಾರೆ.
ಸಂಚಾರಿ ಪೊಲೀಸರ ಹೆಸರಿನಲ್ಲ ನಕಲಿ ಸಂದೇಶ;
ಮೇಲೆ ನೀಡಿರುವ ಸ್ಕ್ರೀನ್‌ಶಾಟ್‌ಗಳಲ್ಲಿ ನೀವು ಗಮನಿಸಿಂದತೆ, ಸೈಬರ್ ವಂಚಕರು ಕಳಿಸುವ ಸಂದೇಶಗಳು URL ಲಿಂಕ್ ಜೊತೆಗೆ, ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಸಲು ಬ್ಯಾಂಕ್ ಪಾಸ್‌ಬುಕ್, ಕಾರ್ಡ್ ವಿವರಗಳ ಫಾರ್ಮ್ ಭರ್ತಿ ಮಾಡಲು ಸೂಚಿಸುತ್ತಾರೆ. ಅಥವಾ ಕೆಲವೊಮ್ಮೆ ಅವರು ಕಳಿಸುವ ಸಂದೇಶ APK ಫೈಲ್ ಮೂಲಕವೂ ಬರುವ ಸಾಧ್ಯತೆಯೂ ಇದೆ.
ಹೀಗೆ ಸೈಬರ್ ವಂಚಕರು ಕಳಿಸುವ ಲಿಂಕ್ ಅಥವಾ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದರೆ, ನೀವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ.
ಸಂಚಾರಿ ಪೊಲೀಸರ ಹೆಸರಿನಲ್ಲ ನಕಲಿ ಸಂದೇಶ ಕಳಿಸಿರುವ ವ್ಯಕ್ತಿ
+91 96126 33375 ಮತ್ತು +91 80189 11435 ಈ ನಂಬರ್‌ಗಳು ತಾರಿಮ್ಚಿ ವಾಕ್ ಹಾಗೂ ಲೂಸಿ ಎನ್‌ಜಿಡಿ ಎಂಬುವವರಿಗೆ ಸೇರಿದ್ದಾಗಿದೆ ಎಂದು ಟ್ರೂಕಾಲರ್ ಮೂಲಕ ಪತ್ತೆ ಹಚ್ಚಲಾಗಿದೆ. ಈ ಸಂಖ್ಯೆಯಿಂದ ಬರುವ ಸಂದೇಶಗಳಿಂದ ಎಚ್ಚರಿಕೆಯಿಂದ ಇರುವುದು ಉತ್ತಮ.
ಒಂದುವೇಳೆ ನಿಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧಿಸಿದ ದಂಡ ಇದ್ದರೂ, ನಿಮ್ಮ ವಾಹನವನ್ನು ಟ್ರಾಫಿಕ್ ಪೊಲೀಸರು ತಕ್ಷಣಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ ಎಂಬ ಅರಿವು ನಿಮಗಿರಲಿ. ಒಂದುವೇಳೆ ನಿಮಗೆ ದಂಡದ ಕುರಿತು ಸಂದೇಹಗಳಿದ್ದರೆ, ಟ್ರಾಫಿಕ್ ಪೊಲೀಸರಿಗೆ ಕರೆ ಮಾಡುವ ಮೂಲಕ ಅಥವಾ ಸ್ಥಳೀಯ ಠಾಣೆಗೆ ಭೇಟಿ ನೀಡುವ ಮೂಲಕ ಅನುಮಾನ ಪರಿಹರಿಸಿಕೊಳ್ಳುವುದು ಉತ್ತಮ.
ಮೊದಲನೆಯದಾಗಿ ನಿಮಗೆ ಪರಿಚಿತ ವ್ಯಕ್ತಿಯಿಂದ ಅಥವಾ ಬೆಂಗಳೂರು ಪೊಲೀಸರ ಹೆಸರಿನಲ್ಲಿ ಬರುವ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ. ವಿಶಷವಾಗಿ ಯಾವುದೇ URL ಅಥವಾ APK ಫೈಲ್ ಅನ್ನು ಕ್ಲಿಕ್ ಮಾಡಬೇಡಿ.
APK ಫೈಲ್‌ಗಳು ಅಥವಾ ಮೂರನೇ ವ್ಯಕ್ತಿ (Third Party) ಅಪ್ಲಿಕೇಶನ್‌ಗಳ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವುದನ್ನು ತಪ್ಪಿಸಿ.
ಯಾವುದೇ ಅಪ್ಲಿಕೇಷನ್ ಡೌನ್‌ಲೋಡ್ ಮಾಡುವಾಗ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್ ಅಥವಾ ಮೈಕ್ರೊಸಾಫ್ಟ್ ವಿಂಡೋಸ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.
ಬೆಂಗಳೂರು ಸಂಚಾರಕ್ಕೆ ಸಂಬಂಧಿಸಿದಂತೆ, ಅವರ ಅಧಿಕೃತ ವೆಬ್‌ಸೈಟ್‌ಗಳಾದ https://btp.karnataka.gov.in ಅಥವಾ https://www.karnatakaone.gov.in/) ಮತ್ತು BTP ASTraM ಅಪ್ಲಿಕೇಶನ್ (ಕರ್ನಾಟಕ ರಾಜ್ಯ ಪೊಲೀಸರು ಅಭಿವೃದ್ಧಿಪಡಿಸಿದ್ದಾರೆ)ಗಳನ್ನು ಬಳಸಿ.
ಮೆಸೆಂಜರ್ ಅಪ್ಲಿಕೇಶನ್‌ಗಳ ಮೂಲಕ ಅಥವಾ ಇಮೇಲ್‌ಗಳ ಮೂಲಕ ಪಾಸ್‌ಬುಕ್, ಬ್ಯಾಂಕ್ ಸಂಬಂಧಿಸಿದ ಪಾಸ್‌ವರ್ಡ್‌ಗಳು, ಒಟಿಪಿಗಳು ಮತ್ತು ಆನ್‌ಲೈನ್ ಖಾತೆ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ .
ಸೈಬರ್ ಬೆದರಿಕೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್ ಅನ್ನು ಯಾವಾಗಲೂ ಇತ್ತೀಚಿನ ಆವೃತ್ತಿಗೆ ನವೀಕರಿಸಿ.
ಸಂಚಾರ ವಿಭಾಗದ ಪೊಲೀಸರ ಬಳಿ ಹೋಗಿ ವಾಹನ ಸಂಖ್ಯೆಯನ್ನು ನೀಡಿದರೆ, ದಂಡ ಎಷ್ಟಿದೆ ಎಂಬುದರ ಮಾಹಿತಿಯನ್ನು ಅವರೇ ನೀಡುತ್ತಾರೆ. ಅವರ ಬಳಿಯೇ ಇರುವ ಸಾಧನದ ಮೂಲಕವೂ ದಂಡ ಪಾವತಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.