ADVERTISEMENT

ಎಲ್‌ಎಲ್‌ಬಿ ಪೂರೈಸಿದ ತೃತೀಯ ಲಿಂಗಿ

ಮನೆಗೆಲಸ ಮಾಡಿ ಓದು, ನ್ಯಾಯಾಧೀಶರಾಗಬೇಕೆಂಬ ಕನಸು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 22:03 IST
Last Updated 17 ಫೆಬ್ರುವರಿ 2021, 22:03 IST
ಸಿ.ಶಶಿ
ಸಿ.ಶಶಿ   

ಮೈಸೂರು: ‘ನೋವು, ನಿಂದನೆ, ಕಿರುಕುಳದಿಂದ ನೊಂದಿದ್ದೆ. ಸಾಧನೆ ಮಾಡಿ ತೋರಿಸಬೇಕೆಂಬ ಛಲ ಹುಟ್ಟಿತು. ಯಾವುದೇ ಕಾರಣಕ್ಕೂ ಭಿಕ್ಷಾಟನೆ ಮಾಡುವುದಾಗಲಿ, ಅಡ್ಡದಾರಿ ಹಿಡಿದು ಬದುಕು ಸಾಗಿಸಬಾರದೆಂದು ನಿಶ್ಚಯಿಸಿ ಓದಲು ನಿರ್ಧರಿಸಿದೆ. ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ವಿದ್ಯಾಭ್ಯಾಸ ಪಡೆದೆ...’

–ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಮೂರು ವರ್ಷಗಳಎಲ್‌ಎಲ್‌ಬಿಕೋರ್ಸ್‌ ಪೂರೈಸಿರುವ ಮೈಸೂರಿನ ಜಯನಗರ ನಿವಾಸಿ, ತೃತೀಯ ಲಿಂಗಿ ಸಿ.ಶಶಿ ಅವರ ಮನದಾಳದ ಮಾತಿದು.

ಕೆಲ ವಿಷಯಗಳು ಬಾಕಿ ಇದ್ದು,ಕಾನೂನು ಪದವಿ ಪಡೆಯುವ ವಿಶ್ವಾಸದಲ್ಲಿದ್ದಾರೆ. ಅವರೀಗ ವಕೀಲರೊಬ್ಬರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಾಧೀಶರಾಗಬೇಕೆಂಬ ಕನಸುಹೊಂದಿದ್ದಾರೆ.

ADVERTISEMENT

‘ಹತ್ತನೇ ತರಗತಿ ಓದುವಾಗಲೇ ನನ್ನ ದೇಹದಲ್ಲಿ ವ್ಯತ್ಯಾಸ, ವರ್ತನೆಯಲ್ಲಿ ಬದಲಾವಣೆ ಕಾಣಿಸತೊಡಗಿತು. ಅಲ್ಲಿಯವರೆಗೆ ಶಶಿಕುಮಾರ್‌ ಆಗಿದ್ದ ನಾನು ಶಶಿ ಆದೆ. ನನ್ನ ವರ್ತನೆ ಕಂಡು ಸ್ನೇಹಿತರು, ಸಂಬಂಧಿಕರು ದೂರವಾಗತೊಡಗಿದರು. ತರಗತಿಯಲ್ಲಿ ನನ್ನ ಪಕ್ಕ ಕೂರುತ್ತಿರಲಿಲ್ಲ. ಹೀಯಾಳಿಸುವವರು, ನಿಂದನೆ ಮಾಡುವವರೇ ಹೆಚ್ಚಾದರು. ಹೀಗಾಗಿ, ಇವರ ಮಧ್ಯೆಯೇ ಬದುಕಿ ತೋರಿಸಬೇಕೆಂದು ನಿರ್ಧರಿಸಿದೆ’ ಎಂದು ಶಶಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘2014ರಲ್ಲೇ ಪದವಿ ಪೂರೈಸಿದೆ.ಆಮೇಲೆಕೆಲವರ್ಷ ಕೆಲಸ ಮಾಡಿ ಎಲ್‌ಎಲ್‌ಬಿ ಕೋರ್ಸ್‌ಗೆ ಸೇರಿದೆ. ನನಗೆ ತಂದೆ, ತಾಯಿ, ಅಕ್ಕ, ತಮ್ಮ, ತಂಗಿ ಇದ್ದಾರೆ’ ಎಂದರು.

‘ತೃತೀಯ ಲಿಂಗಿಗಳು ಎಂದರೆ ಕೆಲವರಿಗೆ ತಪ್ಪು ಕಲ್ಪನೆಗಳಿವೆ. ಸಾಧನೆ ಮಾಡಿ ತೋರಿಸಲು ನಮಗೂ ನೂರಾರು ದಾರಿಗಳಿವೆ, ನಮಗೂ ಸಮಾಜ ಗೌರವ ಕೊಡಬೇಕು’ ಎಂದು ನುಡಿದರು.

ಕೆಲಸ ನೀಡಿದ ವೈದ್ಯೆ: ಆಯುರ್ವೇದ ವೈದ್ಯೆಯಾಗಿರುವ ಡಾ.ಜೆ.ರಶ್ಮಿರಾಣಿ, ತಮ್ಮ ಕ್ಲಿನಿಕ್‌ನಲ್ಲಿ ಶಶಿ ಅವರಿಗೆ ಕೆಲಸ ನೀಡಿ, ವಿದ್ಯಾಭ್ಯಾಸಕ್ಕೂ ನೆರವಾಗಿದ್ದಾರೆ.

‘ವಿದ್ಯಾಭ್ಯಾಸದ ಬಗ್ಗೆ ಒಲವು ಹೊಂದಿದ್ದ ಶಶಿಗೆ ಪೋಷಕರು ಸೇರಿದಂತೆ ಯಾರೂ ಸಹಾಯ ಮಾಡಲಿಲ್ಲ. ಈ ವಿಚಾರ ಗೊತ್ತಾಗಿ ನಾನೇ ಕೆಲಸ ನೀಡಿದೆ. ಈಗಲೂ ಸಂಜೆ ವೇಳೆ ಇಲ್ಲೇ ಕೆಲಸ ಮಾಡುತ್ತಾರೆ’ ಎಂದು ಡಾ.ರಶ್ಮಿರಾಣಿ ಹೇಳಿದರು.

***

ಎಲ್ಲರೂ ಕಾಮ ದೃಷ್ಟಿಯಲ್ಲಿ ನೋಡುತ್ತಾರೆಯೇ ಹೊರತು, ಸ್ನೇಹದಿಂದ ಸ್ವೀಕರಿಸಲ್ಲ. ಏಕೆ ಸಮಾಜ ಎಲ್ಲಾ ತೃತೀಯ ಲಿಂಗಿಗಳನ್ನು ಒಂದೇ ದೃಷ್ಟಿಯಲ್ಲಿ ನೋಡುತ್ತದೆ?
-ಸಿ.ಶಶಿ, ಎಲ್‌ಎಲ್‌ಬಿ ಕೋರ್ಸ್‌ ಪೂರೈಸಿದ ತೃತೀಯ ಲಿಂಗಿ

***

ತೃತೀಯ ಲಿಂಗಿಗಳು ಮುಖ್ಯವಾಹಿನಿಯಲ್ಲಿದ್ದು ಸಾಧನೆ ಮಾಡಬಹುದು ಎಂಬುದಕ್ಕೆ ಶಶಿ ಉದಾಹರಣೆ. ಸಾಧನೆ ಮಾಡಲು ಲಿಂಗತ್ವ ವಿಚಾರ ಮುಖ್ಯವೇ ಅಲ್ಲ.
-ಪ್ರೊ.ಕೆ.ಬಿ.ವಾಸುದೇವ, ನಿರ್ದೇಶಕ, ಕಾನೂನು ಅಧ್ಯಯನ, ವಿದ್ಯಾವರ್ಧಕ ಕಾನೂನು ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.