ADVERTISEMENT

ಸಾರಿಗೆ ಮಂಡಳಿ ಸ್ಥಾಪನೆ ಶೀಘ್ರದಲ್ಲಿ: ಸಚಿವ ಸಂತೋಷ ಲಾಡ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 14:52 IST
Last Updated 28 ಅಕ್ಟೋಬರ್ 2023, 14:52 IST
<div class="paragraphs"><p>ಹುಬ್ಬಳ್ಳಿಯ&nbsp;ಸುಭಾಸ ನಗರದ ಎಚ್.ಕೆ.ಜಿ.ಎನ್ ಸಭಾಂಗಣದಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಲಾರಿ ಡ್ರೈವರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತೋಷ ಲಾಡ್‌ ಮಾತನಾಡಿದರು</p></div>

ಹುಬ್ಬಳ್ಳಿಯ ಸುಭಾಸ ನಗರದ ಎಚ್.ಕೆ.ಜಿ.ಎನ್ ಸಭಾಂಗಣದಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಲಾರಿ ಡ್ರೈವರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತೋಷ ಲಾಡ್‌ ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ‘ಸಾರಿಗೆ ಇಲಾಖೆಯಿಂದ ಸಂಗ್ರಹವಾಗುವ ಸೆಸ್‌ನಲ್ಲಿ ಶೇ 27ರಷ್ಟು ಕಾರ್ಮಿಕ ಇಲಾಖೆಗೆ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರ ಅನುಮೋದನೆ ಪಡೆದು ಸಾರಿಗೆ ಮಂಡಳಿ ಸ್ಥಾಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ADVERTISEMENT

ಇಲ್ಲಿನ ಸುಭಾಸ ನಗರದ ಎಚ್.ಕೆ.ಜಿ.ಎನ್ ಸಭಾಂಗಣದಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಲಾರಿ ಡ್ರೈವರ್ಸ್ ಅಸೋಸಿಯೇಷನ್ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾರ್ಮಿಕ ಇಲಾಖೆಗೆ ಸೆಸ್‌ ನೀಡುವ ಕುರಿತು ಸಾರಿಗೆ ಸಚಿವರ ಜೊತೆ ಸಭೆ ನಡೆಸಲಾಗಿದೆ. ಸರ್ಕಾರ ಅನುಮತಿ ನೀಡಿದ ಬಳಿಕ ಸಾರಿಗೆ ಮಂಡಳಿ ಸ್ಥಾಪಿಸಿ, ಅಸಂಘಟಿ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಯೋಜನೆ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಸಾರಿಗೆ ಮಂಡಳಿ ಸ್ಥಾಪನೆ ನಂತರ ಸೆಸ್‌ನಿಂದ ಹಣ ಬರುತ್ತದೆ.‌ ಅದರ ಜೊತೆಗೆ ಸರ್ಕಾರದಿಂದಲೂ ಹಣ ಪಡೆದು, ಸಾರಿಗೆ ವಲಯದಲ್ಲಿರುವ ಎಲ್ಲ ವರ್ಗದ ಕಾರ್ಮಿಕರ ಏಳಿಗೆಗೂ ಭದ್ರತೆ ಒದಗಿಸಲಾಗುವುದು. ಆಟೊ, ಮ್ಯಾಕ್ಸಿ, ಟಂಟಂ ಚಾಲಕರು ಸೇರಿದಂತೆ ಗ್ಯಾರೇಜ್‌ನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೂ ಅದರಿಂದ ಸೌಲಭ್ಯ ದೊರೆಯಲಿದೆ’ ಎಂದರು.

‘ಬ್ಯಾಂಕ್‌ನಿಂದ ಪಡೆದ ಸಾಲವನ್ನು ಚಾಲಕ ವರ್ಗದವರು ತುಂಬಲು ಸಿದ್ಧವಿದ್ದರೆ, ಪ್ರಾಯೋಗಿಕವಾಗಿ ಸಾರಿಗೆ ಗ್ರೂಪ್‌ ಹೌಸಿಂಗ್ ಯೋಜನೆ ಜಾರಿಗೆ ತರಬಹುದು. ಚಾಲಕರಿಗೆ ಪ್ರತ್ಯೇಕವಾಗಿ ಹೌಸಿಂಗ್ ಯೋಜನೆ ಮಾಡಲು ಸಾಧ್ಯವಿಲ್ಲ. ಸಾರಿಗೆ ಮಂಡಳಿ ನಂತರ, ಅದರ ಹೆಸರಲ್ಲಿ ಜಾಗ ಖರೀದಿಸಿ ಅಲ್ಲಿ ಬೇಕಾದರೆ ಮನೆ ನಿರ್ಮಿಸಿಕೊಡಬಹುದು’ ಎಂದರು.

ಲಾರಿ ಅಸೋಸಿಯೇಷನ್ ಉಪಾಧ್ಯಕ್ಷ ಮಹ್ಮದ್ ಗೌಸ್ ಮಾತನಾಡಿ, ‘ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಲಾರಿ ಚಾಲಕರ ಕೊಡುಗೆ ಸಾಕಷ್ಟು ಇದೆ. ಆದರೆ, ಈವರೆಗೆ ಯಾವೊಬ್ಬ ನಾಯಕ ಸಹ ನಮ್ಮ ಬಗ್ಗೆ ಕರುಣೆ ತೋರಿಲ್ಲ. ಹಗಲು ರಾತ್ರಿ ನಾವು ಸರಕುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತೇವೆ. ಯಾರಿಗೂ ಈ ಶ್ರಮ ಕಂಡುಬರುತ್ತಿಲ್ಲ. ಇಂದಿನ ದುಬಾರಿ ದಿನಗಳಲ್ಲಿ ಬದುಕು ನಡೆಸುವುದು ಅಸಾಧ್ಯವಾಗಿದೆ. ನೆಮ್ಮದಿಯಿಂದ ಜೀವನ ನಡೆಸಲು ಸೂರಿಲ್ಲದೆ ಬೀದಿಯಲ್ಲಿ ಬದುಕುವಂತಾಗಿದೆ. ಕಾರ್ಮಿಕ ಇಲಾಖೆ ನಮ್ಮನ್ನು ಅಸಂಘಟಿತ ವಲಯದಲ್ಲಿ ಇಟ್ಟು ಅನ್ಯಾಯ ಮಾಡಿದೆ. ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡಬೇಕು, ಸಂಘಟಿತ ವರ್ಗಕ್ಕೆ ನಮ್ಮನ್ನು ಸೇರಿಸಿ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.

ಅಸೋಸಿಯೇಷನ್ ಅಧ್ಯಕ್ಷ ಮಾಲತೇಶ ಕುಲಕರ್ಣಿ, ಮುಖಂಡರಾದ ಅನಿಲಕುಮಾರ ಪಾಟೀಲ, ನಾಗರಾಜ ಗೌರಿ, ನೂರಅಹ್ಮದ್ ಖತೀಮ್, ದೀಪಾ ಗೌರಿ, ಲೋಹಿತ ನಾಯ್ಕರ್, ಆರ್‌ಟಿಒ ದಾಮೋದರ ಕೆ., ಎಸಿಪಿ ವಿನೋದ ಮುಕ್ತೇದಾರ, ಉಪಾಧ್ಯಕ್ಷ ಮಹ್ಮದ್'ಗೌಸ್ ಮುಲ್ಲಾ, ಇಕ್ಬಾಲ್ ಕಿತ್ತೂರು, ಮೃತ್ಯುಂಜಯ ಮುದೇನವರ, ಸಂಶುದ್ದೀನ್ ಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.