ADVERTISEMENT

5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಿಗೆ ₹5,200 ಕೋಟಿ ನಷ್ಟ: ರಾಮಲಿಂಗಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 8:27 IST
Last Updated 12 ಮಾರ್ಚ್ 2025, 8:27 IST
<div class="paragraphs"><p>ರಾಮಲಿಂಗಾ ರೆಡ್ಡಿ (ಸಂಗ್ರಹ ಚಿತ್ರ)&nbsp;</p></div>

ರಾಮಲಿಂಗಾ ರೆಡ್ಡಿ (ಸಂಗ್ರಹ ಚಿತ್ರ) 

   

ಬೆಂಗಳೂರು: 'ಕಳೆದ ಐದು ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ₹5,200 ಕೋಟಿ ನಷ್ಟ ಆಗಿದೆ' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಕೇಶವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ನಷ್ಟ ಸರಿದೂಗಿಸಲು ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಪುನಶ್ಚೇತನಕ್ಕೆ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ' ಎಂದರು.

ADVERTISEMENT

'ತೈಲ ಬೆಲೆ, ಸಿಬ್ಬಂದಿ ವೇತನ, ಹಾಗೂ ವಾಹನ ಬಿಡಿಭಾಗಗಳ ಬೆಲೆ ಹೆಚ್ಚಳದಿಂದ ಆರ್ಥಿಕ ಹೊರೆ ಉಂಟಾಗಿದೆ. ಹೀಗಾಗಿ ಕಳೆದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ‌‌' ಎಂದರು.

'ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ₹9,978 ಕೋಟಿ ಅನುದಾನ ಪೈಕಿ ₹7,796 ಕೋಟಿ ಈಗಾಗಲೇ ಮಂಜೂರಾಗಿದೆ. ಬಾಕಿ ಸುಮಾರು 2 ಸಾವಿರ ಕೋಟಿ ಬಿಡುಗಡೆ ಆಗಬೇಕಿದೆ. ಅನುದಾನ ಮಂಜೂರಾದ ಬಳಿಕ ಸಾರಿಗೆ ನಿಗಮಗಳಿಗೆ ನೀಡಲಾಗುವುದು' ಎಂದರು.

'ನಮ್ಮ ಸರ್ಕಾರ ಅಧಿಕಾರ ಬಂದ ಬಳಿಕ ಇದುವರೆಗೂ 5,360 ಬಸ್ ಖರೀದಿಸಲಾಗಿದೆ. ಬಿಎಂಟಿಸಿ ನಿಗಮ ಹೊರತುಪಡಿಸಿದರೆ ಹಿಂದಿನ ಸರ್ಕಾರವು ಇತರ ಸಾರಿಗೆ ನಿಗಮಗಳಿಗೆ ಬಸ್ ಖರೀದಿಗೆ ಮುಂದಾಗಿರಲಿಲ್ಲ. 2016ರಿಂದ 23ರವರೆಗೆ 14 ಸಾವಿರ ನೌಕರರು ನಿವೃತ್ತರಾಗಿದ್ದು, ನೇಮಕಾತಿ ನಡೆದಿರಲಿಲ್ಲ‌. ಖಾಲಿ ಹಾಗೂ ತೆರವಾಗಿರುವ ಹುದ್ದೆಗಳಿಗೆ 9 ಸಾವಿರ ಮಂದಿಯನ್ನು ನೇಮಕಾತಿ ಮಾಡಲಾಗಿದೆ. 1 ಸಾವಿರ ಮಂದಿಗೆ ಅನುಕಂಪ ಆಧಾರದ ಮೇರೆಗೆ ಉದ್ಯೋಗ ನೀಡಲಾಗಿದೆ.

ದಿನಕ್ಕೆ 1.96 ಲಕ್ಷ ಟ್ರಪ್‌ಗಳು ಸಾರಿಗೆ ನಿಗಮಗಳ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದರು.

'ಸಡೃಢ ಆರೋಗ್ಯಕ್ಕಾಗಿ ಕೆಎಸ್‌ಆರ್‌ಟಿಸಿ ನೌಕರರು ವಂತಿಗೆ ರೂಪದಲ್ಲಿ ಮಾಸಿಕ ₹650 ಪಾವತಿಸಿದರೆ ನೌಕರನ ಕುಟುಂಬಸ್ಥರು ಚಿಕಿತ್ಸೆ ಪಡೆಯಬಹುದಾಗಿದೆ. ಇತರ ಸಾರಿಗೆ ನಿಗಮಗಳಿಗೂ ಯೋಜನೆ ವಿಸ್ತರಿಸಿದ್ದು ನೌಕರರಿಂದ ದಾಖಲಾತಿ ಪಡೆಯಲಾಗುತ್ತಿದೆ. ಇನ್ನೂ ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಒಡಂಬಡಿಕೆಯಾದ ರಾಜ್ಯದ 350 ಆಸ್ಪತ್ರೆಗಳಲ್ಲಿ ನೌಕರರು ಚಿಕಿತ್ಸೆ ಪಡೆಯಬಹುದು' ಎಂದು ಸಚಿವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.