ADVERTISEMENT

ಕೋವಿಡ್‌ ಪೀಡಿತರಿಗೆ ಚಿಕಿತ್ಸೆ: ದರಪಟ್ಟಿಗೆ ಖಾಸಗಿ ಆಸ್ಪತ್ರೆಗಳ ಆಕ್ಷೇಪ

ಪ್ಯಾಕೇಜ್‌ ಮೊತ್ತ ಹೆಚ್ಚಿಸದೇ ಇದ್ದರೆ ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 22:22 IST
Last Updated 24 ಜೂನ್ 2020, 22:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಕೋವಿಡ್ ಚಿಕಿತ್ಸೆಗೆ ಸರ್ಕಾರ ನಿಗದಿ
ಪಡಿಸಿರುವ ದರಕ್ಕೆ ಖಾಸಗಿ ಆಸ್ಪತ್ರೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ಯಾಕೇಜ್ ಮೊತ್ತ ಹೆಚ್ಚಿಸದಿದ್ದಲ್ಲಿ ಚಿಕಿತ್ಸೆ ಅಸಾಧ್ಯ ಎಂದು ಎಚ್ಚರಿಸಿವೆ.

ಕೋವಿಡ್ ಚಿಕಿತ್ಸೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳು ಕೆಲ ದಿನಗಳ ಹಿಂದೆ ಸರ್ಕಾರಕ್ಕೆ ದರಪಟ್ಟಿಯನ್ನು ಸಲ್ಲಿಕೆ ಮಾಡಿದ್ದವು. ಆಯುಷ್ಮಾನ್ ಫಲಾನುಭವಿಗಳು ಹಾಗೂ ಫಲಾನುಭವಿಗಳಲ್ಲದ ರೋಗಿಗಳಿಗೆ ಪ್ರತ್ಯೇಕ ದರವನ್ನು ಪಟ್ಟಿಯಲ್ಲಿ ತಿಳಿಸಲಾಗಿತ್ತು. ಫಲಾನುಭವಿಗಳಲ್ಲದ ರೋಗಿಗಳಿಗೆ ನಿಗದಿ‍ಪಡಿಸಬಹುದು ಎಂದು ಸೂಚಿ ಸಲಾಗಿದ್ದ ದರಪಟ್ಟಿಯಲ್ಲಿ ಶೇ 30 ರಷ್ಟು ಕಡಿತಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದು ಖಾಸಗಿ ಆಸ್ಪತ್ರೆಗಳ ಅಸಮಾಧಾನಕ್ಕೆ ಕಾರಣ.

ಆಯುಷ್ಮಾನ್ ಅಥವಾ ಆರೋಗ್ಯ ಕರ್ನಾಟಕ ಫಲಾನುಭವಿಗಳಲ್ಲದ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಖಾಸಗಿ ಆಸ್ಪತ್ರೆಗಳು ನಿರ್ಧರಿಸಿವೆ. ಹಾಗೊಂದು ವೇಳೆ ಮಾಡದೇ ಇದ್ದಲ್ಲಿ, ಫಲಾನುಭವಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವುದು ಅಸಾಧ್ಯ ಎಂಬುದು ಖಾಸಗಿ ಆಸ್ಪತ್ರೆಗಳ ವಾದ.

ADVERTISEMENT

ಆಯುಷ್ಮಾನ್ ಫಲಾನುಭವಿಗಳಲ್ಲದ ರೋಗಿಗಳಿಗೆ ಸಾಮಾನ್ಯ ವಾರ್ಡ್‌ಗೆ ₹ 15 ಸಾವಿರ, ಆಮ್ಲಜನಕ ಸಂಪರ್ಕ ಇರುವ ವಾರ್ಡ್‌ಗೆ ₹ 20 ಸಾವಿರ, ಐಸೋಲೇಷನ್ ಐಸಿಯು ವೆಂಟಿಲೇಟರ್ ರಹಿತ ವಾರ್ಡ್‌ಗೆ ₹ 25 ಸಾವಿರ ಹಾಗೂ ಐಸಲೋಲೇಷನ್ ಐಸಿಯು ವೆಂಟಿಲೇಟರ್ ಸಹಿತ ವಾರ್ಡ್‌ಗೆ ₹ 35 ಸಾವಿರ ನಿಗದಿಪಡಿಸುವಂತೆಖಾಸಗಿ ಆಸ್ಪತ್ರೆಗಳ ಸಂಘಟನೆ ಪ್ರಸ್ತಾವನೆ ಸಲ್ಲಿಸಿತ್ತು. ಈ ದರವನ್ನು ಕ್ರಮವಾಗಿ ₹ 10 ಸಾವಿರ, ₹ 12 ಸಾವಿರ, ₹ 15 ಸಾವಿರ ಹಾಗೂ ₹ 25 ಸಾವಿರಕ್ಕೆ ಇಳಿಕೆ ಮಾಡಲಾಗಿದೆ.

ವೆಚ್ಚ ಅಧಿಕ:‘ನಾವು ಪ್ರಸ್ತಾವನೆ ಸಲ್ಲಿಸಿದ ದರದಲ್ಲಿ ಶೇ 30 ರಷ್ಟು ಕಡಿತ ಮಾಡಲಾಗಿದೆ. ಇದರಿಂದಾಗಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಗುರುವಾರ ಪತ್ರ ಬರೆಯುತ್ತೇವೆ. ಪ್ರತ್ಯೇಕ ವಾರ್ಡ್‌ ನಿರ್ಮಾಣ ಮಾಡುವ ಜತೆಗೆ ರೋಗಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕ ವೆಚ್ಚವಾಗಲಿದೆ’ ಎಂದುಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‍ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್. ರವೀಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಯುಷ್ಮಾನ್ ಫಲಾನುಭವಿಗಳಿಗೆ ನಾವು ಸೂಚಿಸಿದ ದರವನ್ನೇ ಅಂತಿಮ ಮಾಡಲಾಗಿದೆ. ಸಾಮಾಜಿಕ ಕಳಕಳಿಯಿಂದ ಅತ್ಯಂತ ಕಡಿಮೆ ದರವನ್ನು ಪ್ರಸ್ತಾಪಿಸಿದ್ದೆವು. ಯೋಜನೆಯ ಫಲಾನುಭವಿಯಲ್ಲದ ರೋಗಿಗಳಿಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಸಾಮಾನ್ಯ ವಾರ್ಡ್‌ಗೆ ₹ 15 ಸಾವಿರ ನಿಗದಿ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರೆ, ₹ 10 ಸಾವಿರ ನಿಗದಿಪಡಿಸಲಾಗಿದೆ. ಅದೇ ರೀತಿ, ಉಳಿದ ಚಿಕಿತ್ಸಾ ಸೌಲಭ್ಯಗಳಿಗೂ ಕಡಿತ ಮಾಡಲಾಗಿದೆ. ಸರ್ಕಾರ ಮೊದಲೇ ಸೂಚನೆ ನೀಡದ ಪರಿಣಾಮ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿರಲಿಲ್ಲ’ ಎಂದರು.

ಚಿಕಿತ್ಸೆಗೆ ಸಿದ್ಧವಾಗದ ಆಸ್ಪತ್ರೆಗಳು

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲಿಯೇ ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಸರು ನೋಂದಾಯಿಸಲ್ಪಟ್ಟ ಬಹುತೇಕ ಆಸ್ಪತ್ರೆಗಳು ಚಿಕಿತ್ಸೆ ಸಂಬಂಧ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ.

ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿದೆ. 518 ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಯಡಿ ಕೋವಿಡೇತರ ಕಾಯಿಲೆಗಳಿಗೆ ಸೇವೆ ನೀಡುತ್ತಿವೆ. ಆದರೆ, ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ಹಾಗೂ ತರಬೇತಿ ಹೊಂದಿದ ವೈದ್ಯಕೀಯ ಸಿಬ್ಬಂದಿ ಅಗತ್ಯ ಇರುವುದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳು ಚಿಕಿತ್ಸೆಗೆ ಹಿಂದೇಟು ಹಾಕುತ್ತಿವೆ. ಬೆರಳಣಿಕೆಯಷ್ಟು ಆಸ್ಪತ್ರೆಗಳು ಮಾತ್ರ ಪ್ರತ್ಯೇಕ ವಾರ್ಡ್‌ಗಳನ್ನು ನಿರ್ಮಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.